
ಸುರತ್ಕಲ್: ಇಲ್ಲಿನ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಬೋಳಾಸ್ ಆಗೋ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಮಂಗಳವಾರ ದಾಳಿ ಮಾಡಿದ ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿಗಳ ತಂಡ 1,240 ಕೆಜಿ ಖಾದ್ಯ ಎಣ್ಣೆಯನ್ನು ವಶಪಡಿಸಿಕೊಂಡಿದೆ.

ಆಹಾರ ಸುರಕ್ಷತಾ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಎಚ್. ನೇತೃತ್ವದ ತಂಡ ಬೋಳಾಸ್ ಆಗೋ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ದಾಳಿ ಮಾಡಿದೆ. ಈ ವೇಳೆ ತಪ್ಪು ಬ್ರಾಂಡಿಂಗ್ ಮತ್ತು ಲೇಬಲಿಂಗ್ ಮಾಡುತ್ತಿರು ವುದು ಕಂಡು ಬಂದಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಿದಾಗ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಿಂದ ಕಚ್ಚಾ ಕಡಲೆಕಾಯಿ ಎಣ್ಣೆಯನ್ನು ತಂದು ಬೋಳಾಸ್ ಹೆಸರಿನಲ್ಲಿ ಕೋಲ್ಡ್ ಪ್ರೆಸ್ ಕಡಲೆಕಾಯಿ ಎಣ್ಣೆ ಎಂದು ಸ್ಟಿಕ್ಕರ್ ಅಂಟಿಸಿ ಮಾರಾಟ ಮಾಡುವ ಜಾಲ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಇದೇ ರೀತಿ ತಪ್ಪು ಬ್ರಾಂಡಿಂಗ್ ಮತ್ತು ಲೇಬಲಿಂಗ್ ಮಾಡಿ ದಾಸ್ತಾನು ಮಾಡಿದ್ದ ತಲಾ 10 ಲೀ.ನ 11ಬಾಕ್ಸ್ ಕಡಲೆಕಾಯಿ ಎಣ್ಣೆ 35 ಲೀ. ಸಾಮರ್ಥ್ಯದ 30 ಕ್ಯಾನ್ ಕಡಲೆಕಾಯಿ ಎಣ್ಣೆ ಮತ್ತು 20 ಲೀ.
ಸಾಮರ್ಥ್ಯದ 4 ಬಾಕ್ಸ್ ತೆಂಗಿನ ಎಣ್ಣೆಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಮಾರುಕಟ್ಟೆಯಲ್ಲಿ ಕಡಲೆಕಾಯಿ ಕೋಲ್ಡ್ ಪ್ರೆಸ್ಟ್ ಎಣ್ಣೆಗೆ ಭಾರೀ ಬೇಡಿಕೆ ಇದೆ. ಇದನ್ನೇ ಬಂಡವಾಳ ಮಾಡಿಕೊಂಡ ಸಂಸ್ಥೆ ಚಿತ್ರದುರ್ಗ ಜಿಲ್ಲೆಯಲ್ಲಿ ಸಿಗುವ ಸಾಧಾರಣ ಎಣ್ಣೆಯನ್ನು ಕಡಿಮೆ ಬೆಲೆಗೆ ತಂದು ‘ಕೋಲ್ಡ್ ಪ್ರೆಸ್’ ಎಂದು ಲೇಬಲ್ ಹಾಕಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ಆಹಾರ ಸುರಕ್ಷತಾ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಎಚ್. ಮಾಹಿತಿ ನೀಡಿದ್ದಾರೆ.








