


ಬೆಂಗಳೂರು: ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಧ್ಯೆ ಎಥೆನಾಲ್ ಜಟಾಪಟಿ ಮುಂದುವರೆದಿದ್ದು, ಜಟಾಪಟಿ ನಡುವೆ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿಗೆ ಸಚಿವ ರಿಜ್ವಾನ್ ಅರ್ಷದ್ ಪತ್ರ ಬರೆದಿದ್ದಾರೆ.
ಕರ್ನಾಟಕದಲ್ಲಿ ಇ20 ಪೆಟ್ರೋಲ್ ಗುಣಮಟ್ಟ ಮತ್ತು ಪ್ರಮಾಣದಲ್ಲಿ ಸಮಸ್ಯೆ ಬಗ್ಗೆ ತಿಳಿಸಿದ್ದಾರೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣದ ಬಗ್ಗೆ ಲ್ಯಾಬ್ ರಿಪೋರ್ಟ್ ಸಮೇತ ಕೇಂದ್ರಕ್ಕೆ ಸಚಿವ ರಿಜ್ವಾನ್ ಪತ್ರ ಬರೆದಿದ್ದಾರೆ.
ಪತ್ರದಲ್ಲಿ 63 ಬಂಕ್ ಪರಿಶೀಲನೆ ನಡೆಸಿರುವ ಬಗ್ಗೆ ಉಲ್ಲೇಖಿಸಿರುವ ಸಚಿವರು, ತೈಲ ಕಂಪನಿಗಳ 42 ವರದಿಗಳಲ್ಲಿ ಎಥೆನಾಲ್ ಶೇಕಡಾವಾರು ಹೇಳಿಯೇ ಇಲ್ಲ. ಅಲ್ಲದೇ ಲ್ಯಾಬ್ನಲ್ಲಿ ಪರೀಕ್ಷಿಸಿದ 14 ಸ್ಯಾಂಪಲ್ಗಳಲ್ಲಿ 11 ರಲ್ಲಿ ಶೇ.20 ಕ್ಕಿಂತ ಹೆಚ್ಚು ಎಥೆನಾಲ್ ಇದ್ದು, ಅತಿ ಹೆಚ್ಚು 31.2%. ಇದೆ ಎಂದು ತಿಳಿಸಲಾಗಿದೆ.
ಬಂಕ್ಗಳಲ್ಲಿ ಎಥೆನಾಲ್ ಪ್ರಮಾಣ ಎಷ್ಟಿದೆ ಎಂಬುದರ ಬೋರ್ಡ್ ಹಾಕುವಂತೆಯೂ ಸೂಚಿಸಲಾಗಿದೆ. ಬಿಲ್ನಲ್ಲಿ ಎಥೆನಾಲ್ ಪ್ರಮಾಣವನ್ನೂ ಮುದ್ರಿಸಬೇಕು, ಬಂಕ್ನಲ್ಲಿ ಇ10 ಮತ್ತು ಎಥೆನಾಲ್ ರಹಿತ ಪೆಟ್ರೋಲ್ ಕೂಡ ಸಿಗಬೇಕು. ಇದನ್ನು ಸ್ವತಂತ್ರ ಲ್ಯಾಬ್ ನಿಂದ ಪರೀಕ್ಷೆ ಆಗಬೇಕು. ಒಂದು ವೇಳೆ ಎಥೆನಾಲ್ನಿಂದ ವಾಹನ ಹಾಳಾದರೆ ಪರಿಹಾರ ನೀಡಲು ಇ20 ನಿಧಿ ಮಾಡಬೇಕು ಎಂದು ಕೇಂದ್ರಕ್ಕೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಎಥನಾಲ್ ವಿಚಾರದಲ್ಲಿ ರಾಜಕೀಯ ಬೇಡ. ಈ ಎಥನಾಲ್ ಪರೀಕ್ಷೆ ಲ್ಯಾಬ್ ರಿಪೋರ್ಟ್ ಸತ್ಯಾಸತ್ಯತೆಯನ್ನ ರಾಜಕೀಯ ದೃಷ್ಟಿ ಮೇಲಾಟದಿಂದ ನೋಡಬೇಡಿ. ಇದು ಜನರ ಹಿತಾಸಕ್ತಿಗಾಗಿ ಮಾಡಿದ್ದು ಮಾತ್ರ. ಜನ ಕಷ್ಟಪಟ್ಟು ಗಳಿಸಿ ಉಳಿಸುವ ದುಡ್ಡಿನಲ್ಲಿ ಕಾರು ಖರೀದಿ ಮಾಡುತ್ತಾರೆ. ಜನರ ಹಿತಾಸಕ್ತಿ ಅಂಶವನ್ನು ಮಾತ್ರ ಪರಿಗಣಿಸಿ ತುರ್ತಾಗಿ ಇ20 ನೀತಿಗೆ ತಿದ್ದುಪಡಿ ಮಾಡಿ. ಜನರ ವಾಹನ ಹಾಳಾದ್ರೇ ಅದಕ್ಕೊಂದು ನಿಧಿ ಸ್ಥಾಪಿಸಿ ಅಂತಾ ಆಗ್ರಹ ಮಾಡಿದ್ದಾರೆ.
ಹೈಕ್ವಾಲಿಟಿ ಪೆಟ್ರೋಲ್ ನಲ್ಲಿಯೂ ರಾಜ್ಯದಲ್ಲಿ ಎಥನಾಲ್ ಮಿಕ್ಸ್ ಇದೆ. ಕರ್ನಾಟಕದಲ್ಲಿ ಗ್ರಾಹಕರಿಗೆ ಉತ್ತಮಗುಣಮಟ್ಟದ ಪೆಟ್ರೋಲ್ ಲಭ್ಯತೆಯೇ ಇಲ್ಲ. ಲೀಟರ್ಗೆ 120-140 ರೂ. ಇರುವ ಪ್ರೀಮಿಯಂ ಕ್ವಾಲಿಟಿ ಪೆಟ್ರೋಲ್ ನಲ್ಲಿಯೂ ಅತಿ ಹೆಚ್ಚು ಎಥೆನಾಲ್ ಮಿಕ್ಸ್ ಆಗಿದೆ ಎಂದು ಕೇಂದ್ರಕ್ಕೆ ಬರೆದಿರುವ ಪತ್ರದಲ್ಲಿ ಸಚಿವರು ಉಲ್ಲೇಖಿಸಿರುವುದಾಗಿ ವರದಿಯಿಂದ ತಿಳಿದುಬಂದಿದೆ.








