
ಪುತ್ತೂರು: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ ಬಳಿಕ ವಂಚನೆ ಎಸಗಿದ ಆರೋಪದಲ್ಲಿ ಕೃಷ್ಣ ಜೆ. ರಾವ್ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸುವ ಕುರಿತು ರಾಜ್ಯ ಹೈಕೋರ್ಟ್ ನೀಡಿದ್ದ ನಿರ್ದೇಶನದಂತೆ ಉಭಯಪಕ್ಷಗಳು ಬೆಂಗಳೂರಿನ ಮಧ್ಯಸ್ಥಿಕೆ ಕೇಂದ್ರಕ್ಕೆ ಹಾಜರಾಗಿ ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದಾರೆ.ಸಂತ್ರಸ್ತೆ ಹಾಗೂ ಆಕೆಯ ತಾಯಿ ನಮಿತಾ, ಮತ್ತೊಂದೆಡೆ ಆರೋಪಿಯ ತಂದೆ ಪಿ.ಜಿ. ಜಗನ್ನಿವಾಸ ರಾವ್ ಮತ್ತು ಸಂಬಂಧಿಕರೊಬ್ಬರು ಮಧ್ಯಸ್ಥಿಕೆ ಕೇಂದ್ರಕ್ಕೆ ನೇರವಾಗಿ ಹಾಜರಾಗಿದ್ದು, ಆರೋಪಿ ಕೃಷ್ಣ ಜೆ. ರಾವ್ ವಿಡಿಯೊ ಕಾನ್ಫರೆನ್ಸ್ ಮೂಲಕ ಭಾಗವಹಿಸಿ ತನ್ನ ಹೇಳಿಕೆ ನೀಡಿದ್ದಾರೆ.
ಹೈಕೋರ್ಟ್ ನೇಮಿಸಿದ್ದ ಮಧ್ಯಸ್ಥಿಕೆದಾರರಾದ ವಕೀಲೆ ಸುಶೀಲಾ ಅವರು ಮೊದಲ ಹಂತದಲ್ಲಿ ಉಭಯಪಕ್ಷಗಳನ್ನು ಒಟ್ಟಿಗೆ, ಬಳಿಕ ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.ಮಧ್ಯಸ್ಥಿಕೆ ಕೇಂದ್ರದಲ್ಲಿ ನಡೆದ ಪ್ರಕ್ರಿಯೆಯ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಲಾಗಲಿದ್ದು, ಅದರ ಆಧಾರದ ಮೇಲೆ ಪ್ರಕರಣದ ಮುಂದಿನ ಕಾನೂನು ಪ್ರಕ್ರಿಯೆ ಕುರಿತು ನ್ಯಾಯಾಲಯ ನಿರ್ಧಾರ ಕೈಗೊಳ್ಳಲಿದೆ.
ಈ ಹಿಂದೆ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಆರೋಪಿ ಕೃಷ್ಣ ಜೆ. ರಾವ್ ಸಲ್ಲಿಸಿದ್ದ ಅರ್ಜಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದ ವೇಳೆ, ಆರೋಪಿ ಪರ ಹಿರಿಯ ವಕೀಲ ಪಿ.ಪಿ. ಹೆಗ್ಡೆ ಅವರು ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸುವ ಪ್ರಸ್ತಾವನೆ ಸಲ್ಲಿಸಿದ್ದರು. ಅದನ್ನು ಪರಿಗಣಿಸಿದ ನ್ಯಾಯಾಲಯ, ಜೂನ್ 19ರಂದು ಸಂತ್ರಸ್ತೆ, ಆರೋಪಿ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರೂ ಮಧ್ಯಸ್ಥಿಕೆ ಕೇಂದ್ರಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಆದೇಶಿಸಿತ್ತು. ಅದರಂತೆ ಇದೀಗ ಮಧ್ಯಸ್ಥಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮುಂದಿನ ಹಂತದ ವಿಚಾರಣೆ ಹೈಕೋರ್ಟ್ ವರದಿಯ ಆಧಾರದ ಮೇಲೆ ಸಾಗಲಿದೆ.








