Saturday, July 4, 2026
spot_imgspot_img
spot_imgspot_img

ಅಪ್ರಾಪ್ತ ಬಾಲಕನ ಅಪಹರಣ, ಹಲ್ಲೆ: ಇಬ್ಬರು ಆರೋಪಿಗಳ ಬಂಧನ

- Advertisement -
- Advertisement -

ಉಡುಪಿ, ಜು.2: ಅಪ್ರಾಪ್ತ ವಯಸ್ಸಿನ ಬಾಲಕನನ್ನು ಬ್ರಹ್ಮಾವರ ಬಸ್ ನಿಲ್ದಾಣದಿಂದ ಅಪಹರಿಸಿಕೊಂಡು ಕೇರಳಕ್ಕೆ ಕೊಂಡೊಯ್ದು ಅಲ್ಲಿ ಬಲವಂತವಾಗಿ ಕೆಲಸಕ್ಕೆ ಸೇರಿಸಿ ದೌರ್ಜನ್ಯ ಎಸಗಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ವಾರಂಬಳ್ಳಿ ಗ್ರಾಮ ಸಾಲಿಕೇರಿಯ ವಿಖ್ಯಾತ್ ಆಚಾರ್ಯ (19) ಆಗೂ ಮಟಪಾಡಿ ಗ್ರಾಮದ ನಿವಾಸಿ ಸುಚಿತ್ ನಾಯಕ್ (20) ಎಂದು ಗುರುತಿಸಲಾಗಿದೆ. ಇವರಿಬ್ಬರು ಜೂನ್ 1ರಂದು ಮುಂಜಾನೆ 8:30ರ ಸುಮಾರಿಗೆ ಬ್ರಹ್ಮಾವರ ಬಸ್‌ ನಿಲ್ದಾಣದ ಬಳಿಯಿಂದ ಅಪ್ರಾಪ್ತ ಬಾಲಕನನ್ನು ಬಲವಂತವಾಗಿ ಅಪಹರಿಸಿಕೊಂಡು ಕೇರಳದ ತಲಪಾಡಿ ಕುಂಜತ್ತೂರು ಪದವು ಎಂಬಲ್ಲಿಗೆ ಕರೆದೊಯ್ದಿದ್ದರು.ಅಲ್ಲಿ ಆರೋಪಿಗಳು ಬಾಲಕನನ್ನು ಬಲಾತ್ಕಾರವಾಗಿ ವುಡ್ ಕಂಪೆನಿಗೆ ಕೆಲಸಕ್ಕೆ ಸೇರಿಸಿದ್ದರು.

ಬಾಲಕ ತನಗೆ ಮನೆಗೆ ಹೋಗಬೇಕೆಂದು ಹಠ ಹಿಡಿದಾಗ, ಜೂ.9ರಂದು ಸುಚಿತ್ ತಾವಿದ್ದ ರೂಮಿನಲ್ಲಿ ಬಾಲಕನಿಗೆ ಹಲ್ಲೆ ನಡೆಸಿದ್ದು, ವಿಖ್ಯಾತ್ ಚೂರಿ ತೋರಿಸಿ ಕೊಲೆ ಬೆದರಿಕೆ ಹಾಕಿ ನಿಂದಿಸಿದ್ದ. ಈ ಕೃತ್ಯವನ್ನು ಇನ್ನೊಬ್ಬ ಮೊಬೈಲ್‌ನಲ್ಲಿ ವಿಡಿಯೋ ಮಾಡಿರುವುದಾಗಿ ಬಾಲಕನ ತಂದೆ ಬ್ರಹ್ಮಾವರ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಅಪಹರಿಸಲ್ಪಟ್ಟ ಅಪ್ರಾಪ್ತ ಬಾಲಕ ಬ್ರಹ್ಮಾವರದ ಮಟಪಾಡಿ ಗ್ರಾಮ ನಿವಾಸಿಯೊಬ್ಬರ ಪುತ್ರನಾಗಿದ್ದು, ಬ್ರಹ್ಮಾವರ ಸರಕಾರಿ ಹೈಸ್ಕೂಲ್‌ನಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿರುವುದಾಗಿ ಹೇಳಲಾಗಿದೆ.

ಇದೀಗ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ಪ್ರಕರಣದ ಮೂರನೇ ಆರೋಪಿ ಬಾಲಾಪರಾಧಿ ಯಾಗಿದ್ದು, ಆತನನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರು ಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!