
ಮಂಗಳೂರು, ಜು. 3: ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಜೂನ್ 29ರಂದು ನಡೆದ ಸಂಚಲನ ಸೃಷ್ಟಿಸಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯಕ್ಕೆ ಸಹಕರಿಸಿದ ಆರೋಪಿಗಳೂ ಸೇರಿ ಮೂವರನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ಮಹಾರಾಷ್ಟ್ರದಿಂದ ಕೇರಳದ ಪಯ್ಯನ್ನೂರಿಗೆ ಕುಟುಂಬ ಸಮೇತರಾಗಿ ಕಾರಿನಲ್ಲಿ ತೆರಳುತ್ತಿದ್ದ ವಿಕಾಸ್ ಸುಬ್ಬರಾವ್ ಧನವಡೆ (44) ಅವರ ಕಾರನ್ನು ಬೈಕಂಪಾಡಿ ಸಮೀಪ ಎರಡು ಇನ್ನೋವಾ ಹಾಗೂ ಒಂದು ಸ್ವಿಫ್ಟ್ ಕಾರಿನಲ್ಲಿ ಬಂದ 6-7 ಮಂದಿ ಮುಸುಕುಧಾರಿಗಳು ಅಡ್ಡಗಟ್ಟಿದ್ದರು. ತಲವಾರು ತೋರಿಸಿ ಬೆದರಿಕೆ ಹಾಕಿದ ಆರೋಪಿಗಳು ಧನವಡೆ ಅವರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದರು. ಬಳಿಕ ಅವರ ಪತ್ನಿ ಮತ್ತು ಮಗನನ್ನು ಬಲವಂತವಾಗಿ ಅಪಹರಿಸಿ ಕೆಲ ಕಿಲೋಮೀಟರ್ ದೂರದಲ್ಲಿ ಬಿಟ್ಟು, ಕಾರಿನಲ್ಲಿದ್ದ ಸುಮಾರು 180 ಗ್ರಾಂ ಚಿನ್ನಾಭರಣ (ಅಂದಾಜು ₹20 ಲಕ್ಷ), ಎರಡು ಮೊಬೈಲ್‌ಗಳು ಹಾಗೂ ಕಾರು ಸೇರಿ ಒಟ್ಟು ₹23.10 ಲಕ್ಷ ಮೌಲ್ಯದ ಸೊತ್ತು ದರೋಡೆ ಮಾಡಿ ಪರಾರಿಯಾಗಿದ್ದರು.ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ-2023ರ ವಿವಿಧ ಕಲಂಗಳು ಹಾಗೂ ಕೆಪಿಡಿಎಲ್‌ಪಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ತನಿಖೆ ವೇಳೆ ಜೂನ್ 30ರಂದು ಆರೋಪಿಗಳು ಬಿಟ್ಟುಹೋಗಿದ್ದ ನಂಬರ್ ಪ್ಲೇಟ್ ಇಲ್ಲದ ಮಾರುತಿ ಡಿಜೈರ್ ಕಾರನ್ನು ಬಂಟ್ವಾಳ ತಾಲೂಕಿನ ಪಚ್ಚಿನಡ್ಕದ ಗುಡ್ಡ ಪ್ರದೇಶದಲ್ಲಿ ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ.ಮುಂದಿನ ಕಾರ್ಯಾಚರಣೆಯಲ್ಲಿ ಕೇರಳದ ಕಣ್ಣೂರು ಜಿಲ್ಲೆಯ ನಿಮಿಲ್ ಆರ್.ಕೆ. (37) ಎಂಬ ಆರೋಪಿಯನ್ನು ಅಸ್ಟರ್ ಮಿಮ್ಸ್ ಆಸ್ಪತ್ರೆ ಸಮೀಪ ಬಂಧಿಸಲಾಗಿದೆ. ಕೃತ್ಯಕ್ಕೆ ಸಹಕರಿಸಿ ಆಶ್ರಯ ನೀಡಿದ ಆರೋಪಿಗಳಾದ ಕೊಡಗು ಜಿಲ್ಲೆಯ ಇರ್ಷಾದ್ (40) ಹಾಗೂ ಮುಸ್ತಾಫ (49) ಅವರನ್ನು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ.ಪ್ರಾಥಮಿಕ ತನಿಖೆಯಲ್ಲಿ ಪ್ರಕರಣದಲ್ಲಿ ನೇರವಾಗಿ 14 ಮಂದಿ ಭಾಗಿಯಾಗಿದ್ದು, ಇನ್ನಿಬ್ಬರು ಆರೋಪಿಗಳಿಗೆ ಆಶ್ರಯ ಹಾಗೂ ವಾಹನ ಒದಗಿಸಿ ಸಹಕರಿಸಿರುವುದು ಬೆಳಕಿಗೆ ಬಂದಿದೆ. ಒಟ್ಟು 16 ಆರೋಪಿಗಳ ಪೈಕಿ ಮೂವರನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿಗಳೂ ಸೇರಿ ಇನ್ನೂ 13 ಮಂದಿ ತಲೆಮರೆಸಿಕೊಂಡಿದ್ದಾರೆ.ಆರೋಪಿಗಳು ಬಳಸಿದ್ದ ನಾಲ್ಕು ಕಾರುಗಳ ಪೈಕಿ ಒಂದು ಇನ್ನೋವಾ ಕ್ರಿಸ್ಟಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಉಳಿದ ಮೂರು ಕಾರುಗಳು, ದರೋಡೆಗೆ ಒಳಗಾದ 180 ಗ್ರಾಂ ಚಿನ್ನಾಭರಣ ಹಾಗೂ ಎರಡು ಮೊಬೈಲ್ ಫೋನ್‌ಗಳ ಪತ್ತೆ ಕಾರ್ಯ ಮುಂದುವರಿದಿದೆ.ಉತ್ತರ ವಿಭಾಗದ ಎಸಿಪಿ ಶ್ರೀಕಾಂತ್ ಕೆ. ಹಾಗೂ ಸಿಸಿಬಿ ಎಸಿಪಿ ಮನೋಜ್ ಕುಮಾರ್ ನಾಯ್ಕ್ ನೇತೃತ್ವದಲ್ಲಿ ಪಣಂಬೂರು ಪೊಲೀಸ್ ಠಾಣೆ, ಸಿಸಿಬಿ ಹಾಗೂ ವಿವಿಧ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಉಳಿದ ಆರೋಪಿಗಳ ಬಂಧನಕ್ಕಾಗಿ ಶೋಧ ಮುಂದುವರಿದಿದೆ.








