
ಉಳ್ಳಾಲ, ಜೂ.6: ಕೋಟೆಕಾರು ಕೃಷಿ ಸೇವಾ ಸಹಕಾರ ಸಂಘ ಬ್ಯಾಂಕ್‌ನಲ್ಲಿ 2025ರ ಜನವರಿ 17ರಂದು ನಡೆದಿದ್ದ ಬಹುಚರ್ಚಿತ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮತ್ತೋರ್ವ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಧರ್ಮ್ ಬೀರ್ ಬೀರೇಂದ್ರ ಸಿಂಗ್ ಅಲಿಯಾಸ್ ಧರ್ಮವೀರ್ ಸಿಂಗ್ ಅಲಿಯಾಸ್ ಮನೋಜ್ ಜೀತ್ ಲಾಲ್ ವರ್ಮಾ ಅಲಿಯಾಸ್ ಧರ್ಮ್ ಅಲಿಯಾಸ್ ಮಾಸ್ಟರ್ ಅಲಿಯಾಸ್ ಕಳ್ಳು (34) ಎಂದು ಗುರುತಿಸಲಾಗಿದೆ. ಈತ ಉತ್ತರ ಪ್ರದೇಶ ಮೂಲದವನಾಗಿದ್ದು, ಇತ್ತೀಚೆಗೆ ಗುಜರಾತ್‌ನ ಸೂರತ್‌ನಲ್ಲಿ ವಾಸವಾಗಿದ್ದ ಎನ್ನಲಾಗಿದೆ.ಪ್ರಕರಣದ ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವರ ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.
ತಂಡಕ್ಕೆ ದೊರೆತ ಖಚಿತ ಮಾಹಿತಿಯ ಮೇರೆಗೆ ಮಹಾರಾಷ್ಟ್ರದ ಮುಂಬೈ ಸಮೀಪದ ಪನ್ವೇಲ್ ರೈಲ್ವೆ ನಿಲ್ದಾಣದ ಬಳಿ ಮೇ 11, 2026ರಂದು ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.ಬಳಿಕ ಆರೋಪಿಯನ್ನು ಉಳ್ಳಾಲ ಪೊಲೀಸ್ ಠಾಣೆಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗಿದೆ.
ನಂತರ ಮೇ 22ರಂದು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.








