Saturday, July 25, 2026
spot_imgspot_img
spot_imgspot_img

ಧಾರಾಕಾರ ಮಳೆಗೆ ಕುಸಿದು ಬಿದ್ದ ಮನೆ; ಮಾಲೀಕರ ಪ್ರಾಣ ಉಳಿಸಿದ ಬೆಕ್ಕು!

- Advertisement -
- Advertisement -

ಬಾಗಲಕೋಟೆ: ಧಾರಾಕಾರ ಮಳೆಗೆ ಹಣ್ಣಿನ ವ್ಯಾಪಾರಿಯೋರ್ವರ ಮನೆಯ ಮೇಲ್ಛಾವಣಿ ಕುಸಿದಿದ್ದು, ಅದೃಷ್ಟವಶಾತ್, ಸಾಕು ಬೆಕ್ಕಿನಿಂದಾಗಿ ಇಬ್ಬರ ಪ್ರಾಣ ಉಳಿದಿದೆ. ಬಾಗಲಕೋಟೆಯ ವಲ್ಲಭಬಾಯಿ ವೃತ್ತದ ಬಳಿ ಘಟನೆ ನಡೆದಿದ್ದು, ಲಕ್ಷಾಂತರ ರೂ ಮೌಲ್ಯದ ವಸ್ತುಗಳು ನಾಶವಾಗಿದೆ.

ನಿನ್ನೆ(ಶನಿವಾರ) ವಲ್ಲಭಬಾಯಿ ನಗರದಲ್ಲಿ ಆರ್ಭಟಿಸಿದ ಮಳೆಗೆ ಮನೆಯೊಂದರ ಇಡೀ ಮೇಲ್ಛಾವಣಿಯೇ ಕುಸಿದಿದ್ದು, ಸಾಕು ಬೆಕ್ಕಿನಿಂದಾಗಿ ತಂದೆ ಮತ್ತು ಮಗ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶಬೀರ್ ಬಾಗವಾನ್ ಮತ್ತು ಅವರ ಮಗ ಆರ್ಬಾಜ್ ಬಾಗವಾನ್ ಬಾಗಲಕೋಟೆಯ ವಲ್ಲಭಬಾಯಿ ನಗರದ ನಿವಾಸಿಗಳಾಗಿದ್ದು, ಹಣ್ಣಿನ ವ್ಯಾಪಾರ ಮಾಡುತ್ತ ಜೀವನ ಸಾಗಿಸುತ್ತಿದ್ದರು. ನಿನ್ನೆ ತಂದೆ ಮತ್ತು ಮಗ ಮನೆಯಲ್ಲಿದ್ದಾಗ ಮಳೆಯ ತೀವ್ರತೆಗೆ ಮೇಲ್ಛಾವಣಿಯಿಂದ ಸಣ್ಣದಾಗಿ ಮಣ್ಣಿನ ತುಕಡಿಗಳು ಉದುರಲು ಆರಂಭಿಸಿದೆ. ಹೀಗಾಗಿ ಸಾಕು ಬೆಕ್ಕು ಹೊರಗೆ ಓಡಿದೆ. ಇದೇ ವೇಳೆ ಬೆಕ್ಕಿಗೆ ಹಸಿವು ಕೂಡ ಆಗಿದ್ದ ಕಾರಣ ಅದಕ್ಕೆ ಏನಾದರೂ ತಿನ್ನಿಸಬೇಕು ಎನ್ನುವ ಕಾಳಜಿಯಿಂದ ಶಬೀರ್ ಬೆಕ್ಕನ್ನು ಹಿಡಿಯಲು ಅದರ ಹಿಂದೆಯೇ ಹೊರಗೆ ಧಾವಿಸಿದ್ದಾರೆ.

ತಂದೆಯನ್ನು ಕಂಡು ಆರ್ಬಾಜ್ ಕೂಡ ಬೆನ್ನ ಹಿಂದೆ ಮನೆಯಿಂದ ಆಚೆ ಬಂದಿದ್ದಾನೆ. ಇವರಿಬ್ಬರು ಮನೆಯ ಹೊಸ್ತಿಲು ದಾಟಿ ಹೊರಗೆ ಬರುತ್ತಿದ್ದಂತೆಯೇ ಇಡೀ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ.

ಮನೆಯ ಮೇಲ್ಛಾವಣಿಯ ಮಣ್ಣು ಬೀಳುತ್ತಿದ್ದಂತೆ ಬೆಕ್ಕು ಹೊರಗೆ ಓಡಿತು, ಅದಕ್ಕೆ ಹಸಿವಾಗಿದ್ದರಿಂದ ಏನಾದರೂ ತಿನ್ನಿಸಲು ತಂದೆ ಅದನ್ನು ಹಿಡಿಯಲು ಹೋದರು, ನಾನು ಅವರ ಹಿಂದೆ ಹೋದೆ. ನಾವು ಹೊರಬಂದ ತಕ್ಷಣ ಇಡೀ ಮೇಲ್ಮಾವಣಿ ಕುಸಿಯಿತು. ಬೆಕ್ಕಿನಿಂದಲೇ ನಮ್ಮ ಪ್ರಾಣ ಉಳಿಯಿತು, ಇಲ್ಲದಿದ್ದರೆ ನಾವು ಜೀವ ಸಹಿತ ಉಳಿಯುತ್ತಿರಲಿಲ್ಲ’ ಎಂದು ಆರ್ಬಾಜ್ ಹೇಳಿದ್ದಾರೆ.

ಮನೆಯಲ್ಲಿ ನಡೆಯಬೇಕಿದ್ದ ಮದುವೆಯ ಕಾರ್ಯಕ್ರಮವೊಂದರ ನಿಮಿತ್ತ ಕುಟುಂಬದ ಉಳಿದ ಸದಸ್ಯರೆಲ್ಲರೂ ವಿಜಯಪುರಕ್ಕೆ ತೆರಳಿದ್ದರು. ಹೀಗಾಗಿ ಕೇವಲ ತಂದೆ-ಮಗ ಮಾತ್ರ ಮನೆಯಲ್ಲಿದ್ದು, ಸಾಕುಪ್ರಾಣಿಯ ಕಾರಣದಿಂದಾಗಿ ದೊಡ್ಡ ಅನಾಹುತ ತಪ್ಪಿದಂತಾಗಿದೆ.

ಒಂದೆಡೆ ಪ್ರಾಣ ಉಳಿದರೆ, ಇತ್ತ ಮೇಲ್ಛಾವಣಿ ಕುಸಿದ ಪರಿಣಾಮ ಮನೆಯಲ್ಲಿದ್ದ ಪಾತ್ರೆ-ಪಗಡೆಗಳು, ದವಸ ಧಾನ್ಯಗಳು ಹಾಗೂ ವ್ಯಾಪಾರಕ್ಕಾಗಿ ತಂದಿಟ್ಟಿದ್ದ ಲಕ್ಷಾಂತರ ರೂ ಮೌಲ್ಯದ ಮಾವಿನ ಹಣ್ಣು ಸಂಪೂರ್ಣವಾಗಿ ಮಣ್ಣು ಪಾಲಾಗಿದೆ.ತೀವ್ರ ಸಂಕಷ್ಟಕ್ಕೆ ಸಿಲುಕಿರುವ ವ್ಯಾಪಾರಿ ಶಬೀರ್ ಬಾಗವಾನ್, ಜಿಲ್ಲಾಡಳಿತ ಹಾಗೂ ಸರ್ಕಾರ ಸೂಕ್ತ ಪರಿಹಾರ ಒದಗಿಸುವಂತೆ ಮನವಿ ಮಾಡಿದ್ದಾರೆ ಎಂಬುದಾಗಿ ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!