
ಹೊಸದಿಲ್ಲಿ: ಅಪಾಯಕಾರಿ ಕೈಗಾರಿಕೆಗಳಲ್ಲಿ ಬಾಲ ಕಾರ್ಮಿಕರ ನೇಮಕಾತಿಯನ್ನು ನಿಷೇಧಿಸುವ ‘ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ 2016’ರ ನಿಬಂಧನೆಗಳ ಅನುಷ್ಠಾನದ ಮೇಲ್ವಿಚಾರಣೆಗಾಗಿ ವಿಶೇಷ ಕೋಶವನ್ನು ರಚಿಸುವಂತೆ ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ಎಸ್.ವಿ.ಎನ್.ಭಟ್ಟಿ ಮತ್ತು ಎನ್.ವಿ. ಅಂಜಾರಿಯಾ ಅವರ ಪೀಠವು, ಈ ಸಂಬಂಧ ಆಯಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಮೂಲಕ ಜಾರಿ ಸಂಸ್ಥೆಗಳಿಗೆ ಸೂಕ್ತ ನಿರ್ದೇಶನಗಳನ್ನು ಹೊರಡಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಸೂಚಿಸಿದೆ.
ಮಕ್ಕಳು ಹಾಗೂ ಹದಿಹರೆಯದವರ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ, ಕಾಯ್ದೆಯ ನಿಬಂಧನೆಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ವಿಶೇಷ ಕೋಶವನ್ನು ರಚಿಸುವಂತೆ ಮತ್ತು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಮೂಲಕ ಜಾರಿ ಸಂಸ್ಥೆಗಳಿಗೆ ನಿರ್ದೇಶನ ನೀಡಲು ನಾವು ಎರಡನೇ ಪ್ರತಿವಾದಿಗೆ (ಕೇಂದ್ರ) ನಿರ್ದೇಶಿಸುತ್ತೇವೆ’ ಎಂದು ಪೀಠವು ಹೇಳಿದೆ.
ಪೀಠವು ಎನ್ಜಿಒ ‘ಹೆಲ್ತ್ ಫಾರ್ ಮಿಲಿಯನ್ಸ್’ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು.
ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ 2016ರ ಮೂಲಕ 1986ರ ಮೂಲ ಬಾಲ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಇದು ಸೆಪ್ಟೆಂಬರ್ 1, 2016ರಿಂದ ಜಾರಿಗೆ ಬಂದಿತು. ಇದು 14 ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಎಲ್ಲ ರೀತಿಯ ಉದ್ಯೋಗಗಳು ಮತ್ತು ಪ್ರಕ್ರಿಯೆಗಳಲ್ಲಿ ತೊಡಗಿಸುವುದನ್ನು ಸಂಪೂರ್ಣವಾಗಿ ನಿಷೇಧಿಸುತ್ತದೆ.
2009ರಲ್ಲಿ ಸಲ್ಲಿಕೆಯಾಗಿದ್ದ ಈ ಅರ್ಜಿಯು, 1986ರ ಬಾಲ ಕಾರ್ಮಿಕ ಕಾಯ್ದೆಯ ಕಲಂ 3ರ ನಿಬಂಧನೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿತ್ತು. ಈ ಕಾಯ್ದೆಯು ಕುಟುಂಬದ ಶ್ರಮದ ಭಾಗವಾಗಿ ಬೀಡಿ ಕಟ್ಟುವಂತಹ ಅಪಾಯಕಾರಿ ಕೆಲಸಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳಲು ಅವಕಾಶ ನೀಡಿತ್ತು.
ಇಂತಹ ಬಾಲ ಕಾರ್ಮಿಕರಿಗೆ ಶಿಕ್ಷಣ ಸೌಲಭ್ಯಗಳು ಮತ್ತು ಎರಡು ಬಾರಿ ಮಧ್ಯಾಹ್ನದ ಊಟವನ್ನು ಒದಗಿಸಲು ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದೂ ಅರ್ಜಿಯಲ್ಲಿ ಕೋರಲಾಗಿದೆ.








