
ಪುತ್ತೂರು, ಜು.8: ಕೆಲಸಕ್ಕೆ ತೆರಳುತ್ತಿದ್ದ ವೇಳೆ ಪರಿಚಿತ ಯುವಕನೊಬ್ಬ ಚಾಕು ಹಿಡಿದು ನಿಂತಿರುವುದನ್ನು ಕಂಡು, ಆತ ಹಾಗೂ ಆತನ ಸ್ನೇಹಿತರು ವಾಹನದಲ್ಲಿ ತನ್ನನ್ನು ಹಿಂಬಾಲಿಸುತ್ತಿದ್ದಾರೆ ಎಂದು ಭಾವಿಸಿದ ಯುವತಿಯೊಬ್ಬರು ನೀಡಿದ ದೂರಿನ ಮೇರೆಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಆರೋಪಿತ ಯುವಕರು ತಮ್ಮ ವಿರುದ್ಧ ದುರುದ್ದೇಶಪೂರ್ವಕವಾಗಿ ಸುಳ್ಳು ಪ್ರಕರಣ ದಾಖಲಿಸಲು ಯತ್ನಿಸಲಾಗಿದೆ ಎಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ.
ಪೊಲೀಸರ ಪ್ರಕಟಣೆಯ ಪ್ರಕಾರ, ಪುತ್ತೂರಿನ ನಿವಾಸಿಯಾದ ಯುವತಿಯು ಜು.8ರಂದು ಬೆಳಿಗ್ಗೆ ಸುಮಾರು 6.45ಕ್ಕೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ, ತನ್ನ ಪರಿಚಯದ ಹಾಗೂ ಕಾಲೇಜು ಸಹಪಾಠಿಯಾಗಿದ್ದ ಸೊಹೈಲ್ ಎಂಬಾತ ಚಾಕು ಹಿಡಿದು ನಿಂತಿರುವುದನ್ನು ಗಮನಿಸಿದ್ದಾಳೆ. ಅಲ್ಲದೆ, ಸೊಹೈಲ್ ಹಾಗೂ ಆತನೊಂದಿಗೆ ಇದ್ದ ನಾಲ್ವರು ಸ್ನೇಹಿತರು ವಾಹನದಲ್ಲಿ ತನ್ನನ್ನು ಹಿಂಬಾಲಿಸುತ್ತಿದ್ದಾರೆ ಎಂದು ಭಾವಿಸಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
ಪ್ರಕರಣದ ತನಿಖೆ ವೇಳೆ ಯುವಕರನ್ನು ವಿಚಾರಣೆ ನಡೆಸಿದಾಗ, ಅವರು ಬೇಕರಿಯೊಂದರಿಂದ ಬ್ರೆಡ್ ಖರೀದಿಸಿದ್ದು, ಅದಕ್ಕೆ ಚೀಸ್ ಹಚ್ಚಲು ಬೇಕರಿಯಿಂದ ಚಾಕುವನ್ನು ಪಡೆದಿದ್ದೆವು. ಬಳಿಕ ಅದೇ ಚಾಕುವನ್ನು ಹಿಂತಿರುಗಿಸಲು ಹೋಗುತ್ತಿದ್ದೆವು. ಯಾವುದೇ ಅಪರಾಧಿಕ ಕೃತ್ಯದಲ್ಲಿ ನಾವು ತೊಡಗಿಕೊಂಡಿಲ್ಲ. ನಂತರ ಎಂದಿನಂತೆ ಜಿಮ್ಗೆ ತೆರಳಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.
ಇದೇ ವೇಳೆ, ಘಟನೆಯ ನೈಜ ಸಂಗತಿಗಳು ತಿಳಿದಿದ್ದರೂ ಧಾರ್ಮಿಕ ದ್ವೇಷದ ಹಿನ್ನೆಲೆಯೊಂದಿಗೆ ಸಂಘಟನೆಯೊಂದರಲ್ಲಿ ತೊಡಗಿಸಿಕೊಂಡಿರುವ ಮುರಳೀಕೃಷ್ಣ ಹಂಸತಡ್ಕ ಹಾಗೂ ಇತರರು ಯುವತಿಯ ಮೂಲಕ ತಮ್ಮ ವಿರುದ್ಧ ದುರುದ್ದೇಶಪೂರ್ವಕವಾಗಿ ಪ್ರಕರಣ ದಾಖಲಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಯುವಕರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಸಂಬಂಧ ಎರಡೂ ದೂರುಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದು, ತನಿಖೆಯ ಆಧಾರದ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.







