
ತಿರುವನಂತಪುರ: ಕೇರಳದ ಎರಡು ಕೋಳಿ ಫಾರ್ಮ್ಗಳಲ್ಲಿ ಹಕ್ಕಿಜ್ವರ (ಬರ್ಡ್ ಫೂ) ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ, ಅದರ ಹರಡುವಿಕೆಯನ್ನು ತಡೆಯಲು ಸುಮಾರು 26,000 ಕೋಳಿಗಳನ್ನು ಕೊಲ್ಲಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಸುದ್ದಿಸಂಸ್ಥೆಯ ವರದಿಯ ಪ್ರಕಾರ, ಕೋಳಿಗಳ ಹತ್ಯೆ ಕಾರ್ಯಾಚರಣೆಯು ಬುಧವಾರ ಪ್ರಾರಂಭವಾಗಲಿದೆ.
ಆಲಪ್ಪುಝ ಜಿಲ್ಲೆಯ ಎರಡು ಫಾರ್ಮಗಳಲ್ಲಿ ಏವಿಯನ್ ಇನ್ಫ್ಲುಯೆಂಜಾ ಅಥವಾ ಹಕ್ಕಿಜ್ವರ ಪಿಡುಗು ಕಾಣಿಸಿಕೊಂಡಿದ್ದು, ಇದು ಕೌಜುಗಗಳು (ಗೌಜಲಕ್ಕಿ), ಕೋಳಿಗಳು ಮತ್ತು ಬಾತುಕೋಳಿಗಳ ಮೇಲೆ ಪರಿಣಾಮ ಬೀರಿದೆ. ಸೋಂಕಿತ ಫಾರ್ಮ್ಗಳಿಂದ ಸಂಗ್ರಹಿಸಿದ ಮಾದರಿಗಳನ್ನು ಪರೀಕ್ಷೆಗಾಗಿ ಭೋಪಾಲ್ನ ರಾಷ್ಟ್ರೀಯ ಉನ್ನತ ಭದ್ರತಾ ಪ್ರಾಣಿ ರೋಗಗಳ ಸಂಸ್ಥೆಗೆ ಕಳುಹಿಸಲಾಗಿದ್ದು, ಹಕ್ಕಿಜ್ವರ ವೈರಸ್ ದೃಢಪಟ್ಟಿದೆ.
ಇದೇ ವೇಳೆ, ನೆರೆಯ ತಮಿಳುನಾಡಿನ ಜಿಲ್ಲೆಯೊಂದರ ಕೋಳಿ ಫಾರ್ಮ್ನಲ್ಲಿ ಎಚ್5ಎನ್1 ವೈರಸ್ ಪತ್ತೆಯಾದ ನಂತರ ಅಲ್ಲಿ ಹೆಚ್ಚಿನ ಎಚ್ಚರಿಕೆಯನ್ನು ವಹಿಸಲಾಗಿದೆ ಮತ್ತು ಕಣ್ಣಾವಲನ್ನು ತೀವ್ರಗೊಳಿಸಲಾಗಿದೆ. ಸೋಂಕನ್ನು ನಿಯಂತ್ರಿಸಲು ಅಲ್ಲಿ ಈಗಾಗಲೇ ಹಲವಾರು ಸಾವಿರ ಕೋಳಿಗಳನ್ನು ಹತ್ಯೆ ಮಾಡಲಾಗಿದೆ.
ಕಳೆದ ವಾರದ ಆರಂಭದಲ್ಲಿ, ಜಪಾನ್ ತನ್ನ ಚಿಬಾ ಪ್ರದೇಶದಲ್ಲಿ ಸುಮಾರು 40,000 ಕೋಳಿಗಳನ್ನು ಹೊಂದಿರುವ ಕೋಳಿ ಫಾರ್ಮ್ನಲ್ಲಿ ಈ ಋತುವಿನ ಎರಡನೇ ಅತ್ಯಂತ ರೋಗಕಾರಕ ಏವಿಯನ್ ಇನ್ಫ್ಲುಯೆಂಜಾ ಹರಡಿರುವುದನ್ನು ದೃಢಪಡಿಸಿತ್ತು.








