
ಬೆಳ್ತಂಗಡಿ, ಜು. 1: ಉದ್ಯಮಿ ಸುದೀಪ್ ರೈ ನೆಲ್ಯಾಡಿ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸೌಮ್ಯ ಶೆಟ್ಟಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ.ಕಳೆದ ಮಾರ್ಚ್‌ನಲ್ಲಿ ನಡೆದ ಈ ಪ್ರಕರಣದಲ್ಲಿ, ಸುದೀಪ್ ರೈ ಆತ್ಮಹತ್ಯೆಗೆ ಸೌಮ್ಯ ಶೆಟ್ಟಿ ನೀಡಿದ ಮಾನಸಿಕ ಕಿರುಕುಳ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಕಾರಣ ಎಂದು ಆರೋಪಿಸಿ, ಸುದೀಪ್ ಅವರ ತಂದೆ ಬಿ. ದಾಮೋದರ ರೈ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರ ನಿರ್ದೇಶನದ ಮೇರೆಗೆ ತನಿಖೆ ನಡೆಸಿದ ಕಾರ್ಕಳ ನಗರ ಪೊಲೀಸರು ಏಪ್ರಿಲ್ 11ರಂದು ಸೌಮ್ಯ ಶೆಟ್ಟಿಯನ್ನು ಉಡುಪಿಯಲ್ಲಿ ಬಂಧಿಸಿದ್ದರು. ಬಳಿಕ ಉಡುಪಿ ಜಿಲ್ಲಾ ನ್ಯಾಯಾಲಯವು ಏಪ್ರಿಲ್ 30ರಂದು ಆಕೆಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.ಈಗ ಹೈಕೋರ್ಟ್ ಕೂಡ ಜಾಮೀನು ನಿರಾಕರಿಸಿದ್ದು, ಆರೋಪಿತೆಗೆ ಮತ್ತಷ್ಟು ಹಿನ್ನಡೆಯಾಗಿದೆ. ಪ್ರಕರಣದಲ್ಲಿ ಈಗಾಗಲೇ ಚಾರ್ಜ್‌ಶೀಟ್ ಸಲ್ಲಿಕೆಯಾಗಿದ್ದು, ತನಿಖೆ ವೇಳೆ ಹಲವು ದಾಖಲೆಗಳು ಮತ್ತು ಸಾಕ್ಷ್ಯಗಳು ಲಭ್ಯವಾಗಿವೆ ಎಂದು ತಿಳಿದುಬಂದಿದೆ.
ತನಿಖೆಯಲ್ಲಿ ಹಲವು ಆರೋಪಗಳು
ತನಿಖೆಯ ಪ್ರಕಾರ, ಸೌಮ್ಯ ಶೆಟ್ಟಿ ತನ್ನ ಹಿಂದಿನ ವಿವಾಹಗಳ ವಿಚಾರವನ್ನು ಸುದೀಪ್ ಹಾಗೂ ಅವರ ಕುಟುಂಬದವರಿಂದ ಮುಚ್ಚಿಟ್ಟಿದ್ದಳು. ಸುದೀಪ್ ಜೊತೆ ನೋಂದಾಯಿತ ವಿವಾಹವಾಗುವ ಸಂದರ್ಭದಲ್ಲಿ ತಾನು ಅವಿವಾಹಿತೆ ಎಂದು ಸುಳ್ಳು ದಾಖಲೆ ಸಲ್ಲಿಸಿದ್ದಾಳೆ ಎಂಬ ಆರೋಪವೂ ಇದೆ.ಇದಲ್ಲದೆ, ಫೆಬ್ರವರಿ 6ರಂದು ಬೆಳ್ತಂಗಡಿ ತಾಲೂಕಿನ ಕುತ್ರೋಟು ಸತ್ಯನಾರಾಯಣ ದೇವಸ್ಥಾನದಲ್ಲಿ ವಿವಾಹ ನಡೆದ ಬಳಿಕ, ಮಾರ್ಚ್ 19ರಂದು ಕಾರ್ಕಳದ ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿಯೂ ಮತ್ತೊಂದು ವಿವಾಹ ನಡೆದಿರುವ ಕುರಿತು ತನಿಖೆಯಲ್ಲಿ ಉಲ್ಲೇಖಿಸಲಾಗಿದೆ. ಆ ದಿನವೇ ಸುದೀಪ್ ವಿಷ ಸೇವಿಸಿ ತೀವ್ರ ಅಸ್ವಸ್ಥರಾಗಿದ್ದರು ಎಂದು ದೇವಾಲಯದ ಸಿಬ್ಬಂದಿ ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ.
ತನಿಖಾ ದಾಖಲೆಗಳ ಪ್ರಕಾರ, ಸುದೀಪ್ ಅವರ ಕುಟುಂಬದ ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ದಾಖಲೆಗಳನ್ನು ಸೃಷ್ಟಿಸಿರುವ ಶಂಕೆಯೂ ವ್ಯಕ್ತವಾಗಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿದ ಹೈಕೋರ್ಟ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.ದೂರುದಾರ ದಾಮೋದರ ರೈ ಪರವಾಗಿ ಕರ್ನಾಟಕ ಹೈಕೋರ್ಟ್‌ನಲ್ಲಿ ವಕೀಲರಾದ ಚಿದಾನಂದ ಮಾಣಿ ಹಾಗೂ ಹೆಚ್.ಎನ್. ಸಮೀರ್ ವಾದ ಮಂಡಿಸಿದ್ದರು.








