
ಬೆಂಗಳೂರು, ಜು. 3: ಕಾರಿನಲ್ಲಿ ಬಂದಿದ್ದ ಇಬ್ಬರು ಕಳ್ಳರು ಅಪಾರ್ಟ್‌ಮೆಂಟ್‌ಗೆ ನುಗ್ಗಿ ₹1.35 ಲಕ್ಷ ಮೌಲ್ಯದ 27 ಜೋಡಿ ದುಬಾರಿ ಬ್ರ್ಯಾಂಡೆಡ್ ಶೂಗಳನ್ನು ಕಳವು ಮಾಡಿರುವ ಘಟನೆ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸದಾನಂದನಗರದ ಶ್ರೀಧಾಮ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಜು. 24ರಂದು ಬೆಳಗಿನ ಜಾವ ಸುಮಾರು 4.30ರ ವೇಳೆಗೆ ಕಾರಿನಲ್ಲಿ ಬಂದಿದ್ದ ಇಬ್ಬರು ಆರೋಪಿಗಳ ಪೈಕಿ ಓರ್ವ ಅಪಾರ್ಟ್‌ಮೆಂಟ್ ಒಳನುಗ್ಗಿ ವಿವಿಧ ಮಹಡಿಗಳಲ್ಲಿ ಸುತ್ತಾಡಿ, ಪೂಮಾ ಸೇರಿದಂತೆ ವಿವಿಧ ಪ್ರತಿಷ್ಠಿತ ಕಂಪನಿಗಳ ಒಟ್ಟು 27 ಜೋಡಿ ಶೂಗಳನ್ನು ಚೀಲದಲ್ಲಿ ತುಂಬಿಕೊಂಡಿದ್ದಾನೆ. ಬಳಿಕ ಹೊರಗೆ ಕಾರಿನಲ್ಲಿ ಕಾಯುತ್ತಿದ್ದ ಮತ್ತೊಬ್ಬನೊಂದಿಗೆ ಪರಾರಿಯಾಗಿದ್ದಾನೆ.
ಆರೋಪಿಗಳ ಕಳ್ಳತನದ ಕೃತ್ಯ ಅಪಾರ್ಟ್‌ಮೆಂಟ್‌ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೃಶ್ಯಾವಳಿಗಳ ಆಧಾರದಲ್ಲಿ ಬೈಯ್ಯಪ್ಪನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.






