
ಹೊಸದಿಲ್ಲಿ: ಕ್ಯಾನ್ಸರ್ ನಿರೋಧಕ ಔಷಧಿಗಳ ಮಾರಾಟದಲ್ಲಿ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್‌ಪಿ) ಮೇಲಿನ ಲಾಭಾಂಶದ ಮಾರ್ಜಿನ್ ಅನ್ನು ಶೇ.30ಕ್ಕೆ ಮಿತಿಗೊಳಿಸಲು ಕೇಂದ್ರ ಸರಕಾರ ನಿರ್ಧರಿಸಿದ್ದು, ಇದರಿಂದಾಗಿ ಅವುಗಳ ಬೆಲೆ ಶೇ. 70ರಷ್ಟು ಕುಸಿಯುವ ಸಾಧ್ಯತೆಯಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.



ಬೆಲೆ ನಿಯಂತ್ರಣದ ನಿಗದಿತ ಮಿತಿಗೆ ಬಾರದ (ನಾನ್ ಶೆಡ್ಯೂಲ್ಡ್ ಕ್ಯಾನ್ಸರ್ ನಿರೋಧಕ ಔಷಧಿಗಳಿಗೆ ಈ ಮಿತಿಯನ್ನು ಅನ್ವಯಿಸುವ ಪ್ರಸ್ತಾವನೆ ಸರಕಾರದ ಮುಂದಿದೆ. ಬ್ರಾಂಡೆಡ್, ಜೆನೆರಿಕ್, ದೇಶೀಯ ಹಾಗೂ ಆಮದು ಮಾಡಿಕೊಳ್ಳುವ ಕ್ಯಾನ್ಸರ್ ಔಷಧಿಗಳನ್ನು ಈ ಮಿತಿಯು ಅನ್ವಯಿಸಲಿದೆ ಎಂದು ಮೂಲಗಳು ತಿಳಿಸಿವೆ.
ಜೀವರಕ್ಷಕ ಔಷಧಿಗಳನ್ನು ಕೈಗೆಟಕುವ ದರದಲ್ಲಿ ಲಭ್ಯವಾಗುವುದನ್ನು ಖಚಿತಪಡಿಸುವುದು ಈ ಕ್ರಮದ ಉದ್ದೇಶವಾಗಿದೆ. ಇದರ ಪರಿಣಾಮವಾಗಿ ಕ್ಯಾನ್ಸರ್ ನಿರೋಧಕ ಔಷಧಿಗಳ ಗರಿಷ್ಠ ಮಾರಾಟ ದರವು ಶೇ.70ರಷ್ಟು ತಗ್ಗಲಿದೆ. ಇದರಿಂದ ಒಟ್ಟು 2500 . ಉಳಿತಾಯವಾಗಲಿದೆಯೆಂದು ಅಂದಾಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸರಕಾರವು ಕ್ಯಾನ್ಸರ್ ನಿರೋಧಕ ಔಷಧಿಗಳ ಮಾರಾಟದ ಮೇಲಿನ ಲಾಭಾಂಶ ಮಿತಿಯನ್ನು ನಿರ್ಧರಿಸುವ ಅಂತಿಮ ಹಂತದಲ್ಲಿದೆಯೆಂದು ಮೂಲಗಳು ತಿಳಿಸಿವೆ. ಕ್ಯಾನ್ಸರ್ ತಜ್ಞರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಲಾಗಿದ್ದು, ಈ ವಿಷಯವಾಗಿ ಅದು ಶೀಘ್ರದಲ್ಲೇ ಅಂತಿಮ ನಿರ್ಧಾರವನ್ನು ಕೈಗೊಳ್ಳಲಿದೆಯೆಂದು ಮೂಲಗಳು ತಿಳಿಸಿವೆ.
ಭವಿಷ್ಯದಲ್ಲಿ ಕೇಂದ್ರ ಸರಕಾರವು ಈ ಪ್ರಕ್ರಿಯೆಯನ್ನು ಇನ್ನೂ ಹೆಚ್ಚಿನ ಕ್ಯಾನ್ಸರ್ ಮೆಡಿಸಿನ್‌ಗಳು ಮತ್ತಿತರ ಔಷಧಿಗಳಿಗೂ ವಿಸ್ತರಿಸಲಿದೆಯೆಂದು ಮೂಲಗಳು ತಿಳಿಸಿವೆ.








