
ಬೆಂಗಳೂರು : ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆ ನಂತರ ಕೆಲವರು ಆ ಸೀಟುಗಳನ್ನು ರದ್ದುಪಡಿಸಿಕೊಳ್ಳಲು ಕೋರುತ್ತಿದ್ದು, ಅದಕ್ಕೆ ಕೆಲವು ಷರತ್ತುಗಳ ಮೇಲೆ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.ಗುರುವಾರ ಕೆಇಎ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ಎಂಸಿಸಿ ಹಾಗೂ ಇತರ ರಾಜ್ಯಗಳಲ್ಲಿ ಸೀಟು ಹಂಚಿಕೆಯಾದವರು ಕೆಇಎ ಕೌನ್ಸೆಲಿಂಗ್ನಿಂದ ಹೊರ ಹೋಗಲು ಸೆ.20ರಂದು ಸಂಜೆ 5ರವರೆಗೆ ಅವಕಾಶ ನೀಡಲಾಗಿದೆ.
ಇವರಿಗೆ ಯಾವುದೇ ದಂಡ ಇರುವುದಿಲ್ಲ. ಆದರೆ, ಎಂಸಿಸಿ ಕೌನ್ಸೆಲಿಂಗ್ನಲ್ಲಿ ಸೀಟು ಹಂಚಿಕೆಯಾಗದಿರುವ ಅಭ್ಯರ್ಥಿಗಳು ಈ ಸುತ್ತಿನ ಸೀಟು ರದ್ದುಪಡಿಸಿಕೊಳ್ಳಬೇಕಿದ್ದರೆ ಖುದ್ದು ಕೆಇಎ ಕಚೇರಿಗೆ ಬಂದು 10 ಸಾವಿರ ರೂ. ದಂಡ ಕಟ್ಟಬೇಕು. ಇಂತಹ ಅಭ್ಯರ್ಥಿಗಳಿಗೆ ಆಸಕ್ತಿ ಇದ್ದಲ್ಲಿ ಮೂರನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸುವುದಕ್ಕೂ ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ.
3ನೇ ಸುತ್ತಿನ ಸೀಟು ಹಂಚಿಕೆಗೆ ಆಪ್ಪನ್ಸ್ ದಾಖಲಿಸಲು ನಿಗದಿಪಡಿಸಿರುವ ಕೊನೆ ದಿನದ ನಂತರ ಹಾಗೂ ಸ್ಟೇ ವೇಕೆನ್ಸಿ ಸುತ್ತಿಗೆ ಆಪ್ಪನ್ಸ್ ದಾಖಲಿಸಲು ನಿಗದಿಪಡಿಸಿರುವ ಕೊನೆ ದಿನಕ್ಕೂ ಮೊದಲು ಸೀಟು ರದ್ದುಪಡಿಸಿಕೊಳ್ಳುವ ವೈದ್ಯಕೀಯ ಅಭ್ಯರ್ಥಿಗಳು ಕಡ್ಡಾಯವಾಗಿ 1.10 ಲಕ್ಷ ರೂ. ಹಾಗೂ ದಂತ ವೈದ್ಯಕೀಯ ಅಭ್ಯರ್ಥಿಗಳು 60 ಸಾವಿರ ರೂ. ದಂಡ ಪಾವತಿಸಬೇಕಾಗುತ್ತದೆ. ಇಂತಹವರಿಗೆ ನಂತರದ ಸುತ್ತಿನ ಕೌನ್ಸೆಲಿಂಗ್ನಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ ಎಂದು ಮಾಹಿತಿ ನೀಡಿದೆ.ಸ್ಟೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆಗೆ ಆಪ್ಪನ್ಸ್ ದಾಖಲಿಸಲು ನಿಗದಿಪಡಿಸಿರುವ ಕೊನೆ ದಿನಾಂಕದ ನಂತರ ಅಥವಾ ಸ್ಟೇ ವೇಕೆನ್ಸಿ ಸುತ್ತಿನ ನಂತರ ಸೀಟು ರದ್ದುಪಡಿಸಿಕೊಳ್ಳುವ ಅಭ್ಯರ್ಥಿಗಳು 1.10 ಲಕ್ಷ ರೂ. ಹಾಗೂ ಒಂದು ವರ್ಷದ ಕೋರ್ಸ್ ಶುಲ್ಕವನ್ನು ದಂಡವಾಗಿ ಪಾವತಿಸಬೇಕಾಗುತ್ತದೆ.
ಅಲ್ಲದೆ, ಇಂತಹ ಅಭ್ಯರ್ಥಿಗಳನ್ನು ಮುಂದಿನ ಮೂರು ವರ್ಷಗಳ ಕಾಲ ಯುಜಿ ಕೌನ್ಸೆಲಿಂಗ್ನಿಂದ ಹೊರಗಿಡಲಾಗುತ್ತದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಸ್ಪಷ್ಟಪಡಿಸಿದ್ದಾರೆ.








