Sunday, October 4, 2026
spot_imgspot_img
spot_imgspot_img

ಚಾರ್ಮಾಡಿ ಮಾರ್ಗದಲ್ಲಿ ಭೀಕರ ಅಪಘಾತ: ಚಿಕಿತ್ಸೆ ಫಲಿಸದೆ ಶಿಶಿಲದ ದೀಪೇಶ್ ಮೃತ್ಯು-ಮದ್ಯಪಾನ ಎಫ್‌ಐಆರ್‌ ನಲ್ಲಿ ದಾಖಲಾಗಿಲ್ಲ

- Advertisement -
- Advertisement -

ಶಿಶಿಲ: ಮಂತ್ರಾಲಯಕ್ಕೆ ತೆರಳುತ್ತಿದ್ದವರ ಕಾರಿಗೆ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಶಿಶಿಲ ಗ್ರಾಮದ ಮಂತಾಜೆ ನಿವಾಸಿ ದೀಪೇಶ್ (27) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಅಪಘಾತಕ್ಕೆ ಕಾರಣನಾದ ಕಾರಿನ ಚಾಲಕ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ ಬಗ್ಗೆ ಪೊಲೀಸರಿಗೆ ತಿಳಿಸಿದ್ದರೂ, ಆ ವಿಚಾರವನ್ನು ಎಫ್‌ಐಆರ್‌ನಲ್ಲಿ ದಾಖಲಿಸಿಲ್ಲ ಎಂದು ಗಾಯಾಳುಗಳು ಆರೋಪಿಸಿದ್ದಾರೆ.ಸೆ.29ರಂದು ನಸುಕಿನ ಜಾವ ಶಿಶಿಲದ ರಘು (32), ಶಿಶಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುಧೀನ್, ಸತೀಶ, ದೀಪೇಶ್, ದೀಪಕ್ ಅಲಿಯಾಸ್ ತಿರುಮಲೇಶ್ವರ ಹಾಗೂ ಶೋಭಿತ್ ಅಲಿಯಾಸ್ ನಾಗರಾಜ್ ಅವರು ಮಂತ್ರಾಲಯಕ್ಕೆ ತೆರಳಲು ಇನೋವಾ ಕಾರಿನಲ್ಲಿ ಹೊರಟಿದ್ದರು.

ಸ್ನೇಹಿತ ವಸಂತಕುಮಾರ್ ಅವರ ಮಾಲೀಕತ್ವದ ಕೆಎ 03 ಎಂಪಿ 6754 ನೋಂದಣಿಯ ಇನೋವಾ ಕಾರನ್ನು ರಘು ಚಲಾಯಿಸುತ್ತಿದ್ದರು.ಉಜಿರೆ-ಚಾರ್ಮಾಡಿ ಮಾರ್ಗವಾಗಿ ಬಣಕಲ್ ದಾಟಿ ಮೂಡಿಗೆರೆ ಕಡೆಗೆ ತೆರಳುತ್ತಿದ್ದ ವೇಳೆ, ನಸುಕಿನ ಜಾವ ಸುಮಾರು 3.40ಕ್ಕೆ ಸಬ್ಬೇನಹಳ್ಳಿ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಮೂಡಿಗೆರೆ ಕಡೆಯಿಂದ ಬಂದ ಎಂಡೆವರ್ ಕಾರು ಇವರ ಕಾರಿಗೆ ಡಿಕ್ಕಿ ಹೊಡೆದಿದೆ.

ಎದುರಿನಿಂದ ಬಂದ ಕಾರಿನ ಚಾಲಕ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ತಪ್ಪು ಬದಿಯಲ್ಲಿ ವಾಹನ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎಂದು ರಘು ದೂರಿನಲ್ಲಿ ತಿಳಿಸಿದ್ದಾರೆ.ಅಪಘಾತದಲ್ಲಿ ದೀಪೇಶ್ ಅವರ ಕುತ್ತಿಗೆಗೆ ಹಾಗೂ ಸುಧೀನ್ ಅವರ ಎಡಭುಜಕ್ಕೆ ಗಾಯಗಳಾಗಿದ್ದು, ರಘು, ಸತೀಶ, ನಾಗರಾಜ್ ಹಾಗೂ ದೀಪಕ್ ಅವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದವು. ಗಾಯಾಳುಗಳನ್ನು ಮೊದಲು ಬಣಕಲ್‌ನ ಕೃಷ್ಣ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ವೈದ್ಯರ ಸಲಹೆಯಂತೆ ದೀಪೇಶ್ ಹಾಗೂ ಸುಧೀನ್ ಅವರನ್ನು ಉಜಿರೆಯ ಎಸ್‌ಡಿಎಂ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಹಿನ್ನೆಲೆಯಲ್ಲಿ ದೀಪೇಶ್ ಅವರನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.ಅಪಘಾತಕ್ಕೆ ಕಾರಣವಾದ ಕೆಎ 51 606 9399 ನೋಂದಣಿಯ ಎಂಡೆವರ್ ಕಾರನ್ನು ಆಲ್ಲೂರು ನಿವಾಸಿ ಸುಂದರೇಶ್ ಅವರ ಪುತ್ರ ಅಮೋಘ ಡಿ.ಎಸ್. ಚಲಾಯಿಸುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರಣ ದೂರು ನೀಡಲು ವಿಳಂಬವಾಗಿದ್ದು, ಅ.1ರಂದು ಸಂಜೆ 5 ಗಂಟೆಗೆ ಬಣಕಲ್ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 54/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 281 ಹಾಗೂ 125(ಎ) ಅಡಿ ಪ್ರಕರಣ ದಾಖಲಿಸಲಾಗಿದೆ.

ಆದರೆ, ಅಪಘಾತಕ್ಕೆ ಕಾರಣನಾದ ಚಾಲಕ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ ಬಗ್ಗೆ ಪೊಲೀಸರಿಗೆ ತಿಳಿಸಿದ್ದರೂ ಎಫ್‌ಐಆರ್‌ನಲ್ಲಿ ಆ ವಿಚಾರವನ್ನು ದಾಖಲಿಸಿಲ್ಲ ಎಂದು ಗಾಯಾಳುಗಳು ಆರೋಪಿಸಿದ್ದಾರೆ. ಚಾಲಕನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು ಎಂದೂ ಅವರು ತಿಳಿಸಿದ್ದಾರೆ.ಈ ಕುರಿತು ಬಣಕಲ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ದಿಲೀಪ್ ಅವರನ್ನು ಪ್ರಶ್ನಿಸಿದಾಗ ತಮ್ಮೊಂದಿಗೆ ದುರ್ವರ್ತನೆ ತೋರಿದ್ದಾರೆ. “ನಾನು ಆ ತರ ಸೇರಿಸುವುದಿಲ್ಲ, ನೀವು ಏನು ಮಾಡುತ್ತೀರೋ ಮಾಡಿ” ಎಂದು ಹೇಳಿ ಬೆದರಿಸುವ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ಗಾಯಾಳುಗಳು ಆರೋಪಿಸಿದ್ದಾರೆ.ಈ ವಿಚಾರವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಸಿ.ಟಿ. ರವಿ ಹಾಗೂ ಕೋಟಾ ಶ್ರೀನಿವಾಸ್ ಪೂಜಾರಿ ಅವರ ಗಮನಕ್ಕೂ ತಂದಿದ್ದಾಗಿ ಗಾಯಾಳುಗಳು ತಿಳಿಸಿದ್ದಾರೆ.

ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಆರೋಪವಿದ್ದರೂ ಎಫ್‌ಐಆರ್‌ನಲ್ಲಿ ಏಕೆ ದಾಖಲಿಸಿಲ್ಲ ಎಂದು ಪೊಲೀಸ್ ಅಧಿಕಾರಿಯನ್ನು ಪ್ರಶ್ನಿಸಲಾಗಿತ್ತು. ಸಂಬಂಧಿತ ವಿಚಾರವನ್ನು ಸೇರಿಸುವುದಾಗಿ ತಿಳಿಸಿದ್ದರೂ ಬಳಿಕ ದಾಖಲಿಸಿಲ್ಲ ಎಂದು ಗಾಯಾಳುಗಳು ಆರೋಪಿಸಿದ್ದಾರೆ.ಇದರಿಂದ ಪ್ರಕರಣವನ್ನು ದಾರಿ ತಪ್ಪಿಸುವ ಪ್ರಯತ್ನ ನಡೆದಿದೆ ಎಂದು ಗಾಯಾಳುಗಳು ಆಕ್ರೋಶ ವ್ಯಕ್ತಪಡಿಸಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಅವರಿಗೂ ವಿಷಯ ತಿಳಿಸಿದ್ದರೂ ಸಮರ್ಪಕವಾಗಿ ಸ್ಪಂದನೆ ಸಿಗಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಮೃತ ದೀಪೇಶ್ ಅವರು ತಾಯಿ ಕಮಲ, ಸಹೋದರರಾದ ದೀಪಕ್, ದೀಕ್ಷಿತ್ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

- Advertisement -

Related news

error: Content is protected !!