

ಮಂಗಳೂರು: ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಇ-ಚಲನ್ ದಂಡ ಪಾವತಿಸುವಂತೆ ಸಾರ್ವಜನಿಕರ ಮೊಬೈಲ್‌ಗೆ ನಕಲಿ ಲಿಂಕ್ ಹಾಗೂ ಎಪಿಕೆ ಫೈಲ್‌ಗಳನ್ನು ಎಸ್‌ಎಂಎಸ್ ಮತ್ತು ವಾಟ್ಸಾಪ್ ಮೂಲಕ ಕಳುಹಿಸಿ ಸೈಬರ್ ವಂಚನೆ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಈ ರೀತಿಯ ಸೈಬರ್ ವಂಚನೆಗೆ ಸಂಬಂಧಿಸಿ ಮಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 2026ನೇ ಸಾಲಿನಲ್ಲಿ ಈವರೆಗೆ ಒಟ್ಟು 8 ಪ್ರಕರಣಗಳು ದಾಖಲಾಗಿವೆ. ವಂಚನೆಗೆ ಒಳಗಾದ ಸಾರ್ವಜನಿಕರು ಒಟ್ಟು ಸುಮಾರು 44 ಲಕ್ಷ ರೂ. ಕಳೆದುಕೊಂಡಿದ್ದಾರೆ.
ವಾಹನದ ಮೇಲೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದೆಯೇ ಎಂಬುದನ್ನು ಸರ್ಕಾರದ ಅಧಿಕೃತ ಇ-ಚಲನ್ ವೆಬ್‌ಸೈಟ್‌ನಲ್ಲಿ ಅಥವಾ ಹತ್ತಿರದ ಸಂಚಾರಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕವೇ ದಂಡ ಪಾವತಿಸಬೇಕು ಎಂದು ಪೊಲೀಸ್ ಆಯುಕ್ತರು ಸಲಹೆ ನೀಡಿದ್ದಾರೆ.

ಸೈಬರ್ ವಂಚನೆಯಿಂದ ದೂರವಿರಲು ಈ ಮುನ್ನೆಚ್ಚರಿಕೆ ಪಾಲಿಸಿ:
ಇ-ಚಲನ್ ಬಾಕಿ ಇದೆಯೇ ಎಂಬುದನ್ನು https://echallan.parivahan.nic.in ಎಂಬ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾತ್ರ ಪರಿಶೀಲಿಸಿ, ಅಲ್ಲಿಯೇ ದಂಡ ಪಾವತಿಸಬೇಕು.
ಇ-ಚಲನ್ ಸಂದೇಶದ ಬಗ್ಗೆ ಸಂಶಯವಿದ್ದಲ್ಲಿ ಹತ್ತಿರದ ಸಂಚಾರಿ ಪೊಲೀಸ್ ಠಾಣೆ ಅಥವಾ ಸಂಚಾರಿ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಖಚಿತಪಡಿಸಿಕೊಳ್ಳಬೇಕು.
ಅಂಚೆ ಮೂಲಕ ಇ-ಚಲನ್ ನೋಟಿಸ್ ಬಂದಿದ್ದರೆ ದಂಡವನ್ನು Mangalore One ಅಥವಾ Karnataka One ಮೂಲಕ ಪಾವತಿಸಬೇಕು.
ಮೊಬೈಲ್‌ಗೆ ಬರುವ ಅಪರಿಚಿತ ಎಪಿಕೆ ಫೈಲ್‌ಗಳನ್ನು ಯಾವುದೇ ಕಾರಣಕ್ಕೂ ಡೌನ್‌ಲೋಡ್ ಅಥವಾ ಇನ್‌ಸ್ಟಾಲ್ ಮಾಡಬಾರದು.
ಅಪರಿಚಿತ ವ್ಯಕ್ತಿಗಳಿಂದ ಬರುವ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು.
ನಕಲಿ ಲಿಂಕ್‌ಗಳ ಮೂಲಕ ಬ್ಯಾಂಕ್ ಖಾತೆ, ಎಟಿಎಂ ಕಾರ್ಡ್, ಒಟಿಪಿ ಅಥವಾ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬಾರದು.
ಅಧಿಕೃತ ವೆಬ್‌ಸೈಟ್‌ನಂತೆ ಕಾಣುವ ನಕಲಿ ವೆಬ್‌ಸೈಟ್‌ಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕು. ವೆಬ್‌ಸೈಟ್‌ನಲ್ಲಿ HTTPS ಇರುವುದರಿಂದಲೇ ಅದು ಅಧಿಕೃತ ಎಂದು ನಂಬಬಾರದು.
ಮೊಬೈಲ್‌ಗೆ ಬರುವ ಇ-ಚಲನ್ ದಂಡ ಪಾವತಿ ಸಂದೇಶದ ಬಗ್ಗೆ ಯಾವುದೇ ಸಂಶಯವಿದ್ದಲ್ಲಿ 0824-2220823 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಖಚಿತಪಡಿಸಿಕೊಳ್ಳಬಹುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.








