ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಸಂಬಂಧಿಸಿದ ನೀತಿಯಲ್ಲಿ ಮಹತ್ವದ ಸ್ಪಷ್ಟೀಕರಣ ನೀಡಿದೆ. ಮೃತ ನೌಕರರ ಅವಲಂಬಿತ ಮಗಳು ಅಥವಾ ಸಹೋದರಿಯು ನಿಗಮದ ಮೃತ ನೌಕರರೊಂದಿಗೆ ಅವರ ಜೀವಿತಾವಧಿಯಲ್ಲಿ ವಾಸವಿದ್ದುದನ್ನು ತಹಶೀಲ್ದಾರ್ ನೀಡುವ ವಾಸಸ್ಥಳ ಪ್ರಮಾಣ ಪತ್ರದ ಮೂಲಕ ಪರಿಗಣಿಸಿ ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡಲು ನಿಗಮ ಒಪ್ಪಿಗೆ ನೀಡಿದೆ.

ಈ ಕುರಿತು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆ ಸಂಖ್ಯೆ 1749, ದಿನಾಂಕ 13-03-2026 ರಂದು ಆದೇಶ ಹೊರಡಿಸಿದ್ದಾರೆ.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನೀತಿ-2018ನ್ನು ನಿಗಮದಲ್ಲಿ ಈಗಾಗಲೇ ಜಾರಿಗೆ ತರಲಾಗಿದ್ದು, ಅದರ ಮುಂದುವರೆದ ನಿರ್ದೇಶನಗಳಾಗಿ ಈ ಹೊಸ ಸ್ಪಷ್ಟೀಕರಣ ನೀಡಲಾಗಿದೆ.ನಿಗಮದ ನಿರ್ದೇಶಕರ ಮಂಡಳಿಯು 07-02-2026ರಂದು ನಡೆದ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಂಡಿದ್ದು, ಮೃತ ನೌಕರರ ಅವಲಂಬಿತ ಮಗಳು ಅಥವಾ ಸಹೋದರಿಯು — ಅವಿವಾಹಿತ, ವಿವಾಹಿತ, ವಿಚ್ಛೇದಿತ ಅಥವಾ ವಿಧವೆ ಆಗಿದ್ದರೂ — ಅವರು ನೌಕರರ ಜೀವಿತಾವಧಿಯಲ್ಲಿ ಅವರ ಮೇಲೆ ಅವಲಂಬಿತರಾಗಿ ಜೊತೆಯಾಗಿ ವಾಸವಿದ್ದರೆ, ಸಂಬಂಧಪಟ್ಟ ತಹಶೀಲ್ದಾರ್ ನೀಡುವ ವಾಸಸ್ಥಳ ಪ್ರಮಾಣ ಪತ್ರವನ್ನು ಪರಿಗಣಿಸಿ ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಅರ್ಹತೆ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.ಈ ಆದೇಶವನ್ನು ಎಲ್ಲ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿ ಅದರಂತೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ. ಉಳಿದಂತೆ, 2018ರ ಅನುಕಂಪ ನೇಮಕಾತಿ ನೀತಿ ಹಾಗೂ ಹಿಂದಿನ ಸುತ್ತೋಲೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ನಿಗಮ ಸ್ಪಷ್ಟಪಡಿಸಿದೆ.











