ವಿಟ್ಲ: ಶ್ರೀ ದೇವತಾ ಸಮಿತಿ ವಿಟ್ಲ ಇದರ ಆಶ್ರಯದಲ್ಲಿ ನಡೆಯುವ 55ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವವು ಅಕ್ಟೋಬರ್ 16ರಿಂದ 20ರವರೆಗೆ ವಿಟ್ಲದ ಶ್ರೀಮತ್ ಅನಂತೇಶ್ವರ ದೇವಸ್ಥಾನದ ಪರಿಜ್ಞಾನ ಅತಿಥಿಗೃಹದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಅಕ್ಟೋಬರ್ 16ರಂದು ಬೆಳಿಗ್ಗೆ ಗಣಪತಿ ಹವನ, ಶ್ರೀ ಅನಂತೇಶ್ವರ ಹಾಗೂ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ, ಶ್ರೀ ಚಂದ್ರನಾಥ ಸ್ವಾಮಿ ನವಿಲು ಬಸದಿಯಿಂದ ಶ್ರೀ ಶಾರದಾ ಮಾತೆಯ ವಿಗ್ರಹವನ್ನು ಮೆರವಣಿಗೆಯಲ್ಲಿ ತಂದು ಪ್ರತಿಷ್ಠಾಪಿಸುವ ಕಾರ್ಯಕ್ರಮ ನಡೆಯಲಿದೆ. ಬಳಿಕ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ದೇವತಾ ಸಮಿತಿಯ ಗೌರವಾಧ್ಯಕ್ಷ ಎಂ. ರಾಧಾಕೃಷ್ಣ ನಾಯಕ್ ಧ್ವಜಾರೋಹಣ ನೆರವೇರಿಸಲಿದ್ದು, ಮಾಜಿ ಸಂಸದ ಹಾಗೂ ಬಿಜೆಪಿ ಕರ್ನಾಟಕದ ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಸಮಿತಿಯ ಅಧ್ಯಕ್ಷ ನರ್ಸಪ್ಪ ಪೂಜಾರಿ ನಿಡ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಅರುಣ್ ಶ್ಯಾಮ್, ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಹಾಗೂ ಲಯನ್ಸ್ ಕ್ಲಬ್ ವಿಟ್ಲದ ಅಧ್ಯಕ್ಷೆ ಡಾ. ಗಾಯತ್ರಿ ಜಿ. ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಅಂದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದಿವ್ಯಜ್ಯೋತಿ ಕಲಾವಿದರು ಎರುಂಬು ತಂಡದಿಂದ ಮೋಹನದಾಸ್ ರೈ ಎರುಂಬು ನಿರ್ದೇಶನದ ತುಳು ಹಾಸ್ಯಮಯ ಸಾಂಸಾರಿಕ ನಾಟಕ ಪ್ರದರ್ಶನಗೊಳ್ಳಲಿದೆ.

ಅಕ್ಟೋಬರ್ 17ರಂದು ಭಕ್ತಿಗೀತೆಗಳ ಸಂಗೀತ ಸ್ಪರ್ಧೆ, ವಂದೇ ಮಾತರಂ ಕಂಠಪಾಠ ಹಾಗೂ ಪೆನ್ಸಿಲ್ನಲ್ಲಿ ದೇವರ ಚಿತ್ರ ರಚನೆ ಸ್ಪರ್ಧೆಗಳು ನಡೆಯಲಿವೆ. ಮಧ್ಯಾಹ್ನ ರಂಗವಲ್ಲಿ ಸ್ಪರ್ಧೆ ಆಯೋಜಿಸಲಾಗಿದ್ದು, ಸಂಜೆ 7ರಿಂದ ವೇದಮೂರ್ತಿ ವಿಜಯ್ ಕುಮಾರ್ ಭಟ್ (ಸುಧಾತನಯ) ಮತ್ತು ಬಳಗ ಹಾಗೂ ಶ್ರೀ ಸಾರಸ್ವತ ಭಜನಾ ಮಂಡಳಿ ವಿಟ್ಲ ಇವರಿಂದ ಭಜನ್ ಸಂಧ್ಯಾ ಕಾರ್ಯಕ್ರಮ ನಡೆಯಲಿದೆ.ಅಕ್ಟೋಬರ್ 18ರಂದು ಭಗವದ್ಗೀತೆಯ 16ನೇ ಅಧ್ಯಾಯದ 1ರಿಂದ 15ನೇ ಶ್ಲೋಕಗಳ ಕಂಠಪಾಠ ಸ್ಪರ್ಧೆ, ಹೂಹಾರ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆ ನಡೆಯಲಿವೆ. ಪ್ರಬಂಧ ಸ್ಪರ್ಧೆಯ ವಿಷಯ ‘ಇಂದಿನ ಶಿಕ್ಷಣ ಪಠ್ಯಕ್ರಮದಲ್ಲಿ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಯ ಪಾಠಗಳು ಅವಶ್ಯಕವೇ?’ ಎಂಬುದಾಗಿದೆ. ಸಂಜೆ ವಿಶೇಷ ದೀಪಾಲಂಕಾರದೊಂದಿಗೆ ರಂಗಪೂಜೆ ನಡೆಯಲಿದ್ದು, ಸಂಜೆ 7ರಿಂದ 9ರವರೆಗೆ ಮಿಜಾರ್ ಎಡಪದವಿನ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿಯಿಂದ ಭಜನಾಮೃತ ಕಾರ್ಯಕ್ರಮ ನಡೆಯಲಿದೆ.
ಅಕ್ಟೋಬರ್ 19ರಂದು 15 ವರ್ಷದೊಳಗಿನ ಮಕ್ಕಳಿಗೆ ದೇವತೆಗಳು ಮತ್ತು ಭಾರತದ ಮಹಾಪುರುಷರ ವೇಷಗಳಿಗೆ ಸೀಮಿತವಾದ ಛದ್ಮವೇಷ ಸ್ಪರ್ಧೆ ನಡೆಯಲಿದೆ. ಸಂಜೆ 6.30ಕ್ಕೆ ಝೀ ಕನ್ನಡ ಸರಿಗಮಪ ಜೂನಿಯರ್ಸ್ನ ಪ್ರಥಮ ರನ್ನರ್ ಅಪ್ ಮಾಸ್ಟರ್ ಅಚಿಂತ್ಯ ರೈ ಮಂಗಳೂರು ಅವರಿಂದ ಗಾನಾಮೃತ ಕಾರ್ಯಕ್ರಮ ಜರುಗಲಿದೆ.ಅಕ್ಟೋಬರ್ 20ರಂದು ಬೆಳಿಗ್ಗೆ ಅಕ್ಷರಾಭ್ಯಾಸ ಹಾಗೂ ಸಮಾರೋಪ ಸಮಾರಂಭ ನಡೆಯಲಿದ್ದು, ಶ್ರೀ ದೇವತಾ ಸಮಿತಿ ವಿಟ್ಲದ ಅಧ್ಯಕ್ಷ ನರ್ಸಪ್ಪ ಪೂಜಾರಿ ನಿಡ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಸತ್ಯಸಾಯಿ ಲೋಕಸೇವಾ ಪದವಿಪೂರ್ವ ಕಾಲೇಜು ಅಳಿಕೆಯ ಪ್ರಾಂಶುಪಾಲ ವೆಂಕಟಕೃಷ್ಣ ಶರ್ಮಾ ಬಿ., ರೋಟರಿ ಕ್ಲಬ್ ವಿಟ್ಲದ ದಾಸಪ್ಪ ಪೂಜಾರಿ ಎನ್., ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಅಧ್ಯಕ್ಷೆ ಶ್ವೇತಾ ರವಿಕುಮಾರ್ ಹಾಗೂ ಜೆಸಿಐ ವಿಟ್ಲದ ಅಧ್ಯಕ್ಷ ಸಂದೀಪ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ವಿಸರ್ಜನಾ ಆರತಿ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಬಳಿಕ ಕರ್ನಾಟಕ ಕಲಾಶ್ರೀ ಡಾ. ಪಿ.ಕೆ. ದಾಮೋದರ್ ಮತ್ತು ಬಳಗದಿಂದ ವಾದ್ಯಗೋಷ್ಠಿ ನಡೆಯಲಿದ್ದು, ಸಂಜೆ 4.30ಕ್ಕೆ ಶ್ರೀ ದೇವಿಯ ವೈಭವದ ಶೋಭಾಯಾತ್ರೆ ಆರಂಭವಾಗಲಿದೆ. ಶೋಭಾಯಾತ್ರೆಯ ಬಳಿಕ ಶ್ರೀ ಅನಂತೇಶ್ವರ ದೇವಸ್ಥಾನದ ಕೆರೆಯ ಬಳಿ ಪೂಜೆ, ವಂದೇ ಮಾತರಂ ಹಾಗೂ ಧ್ವಜಾವತರಣ ನೆರವೇರಿಸಿ ಕೆರೆಯಲ್ಲಿ ಶ್ರೀ ಶಾರದಾ ಮಾತೆಯ ವಿಗ್ರಹ ವಿಸರ್ಜನೆ ಮಾಡಲಾಗುವುದು.ಶ್ರೀ ಶಾರದಾ ಮಹೋತ್ಸವದ ಎಲ್ಲಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸುವಂತೆ ಶ್ರೀ ದೇವತಾ ಸಮಿತಿ ವಿಟ್ಲದ ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ವಿನಂತಿಸಿದ್ದಾರೆ.








