ಹೊಸದಿಲ್ಲಿ.ಆ.4: ನೀಟ್ ಪರೀಕ್ಷೆ ಬರೆದ ಆರು ವಿದ್ಯಾರ್ಥಿಗಳು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಅಪ್‌ಲೋಡ್ ಮಾಡಿರುವ ಒಎಂಆರ್ ಶೀಟ್‌ಗಳಲ್ಲಿಯ ಉತ್ತರಗಳು ತಾವು ತಮ್ಮ ಒಎಂಆರ್ ಶೀಟ್‌ಗಳಲ್ಲಿ ಗುರುತಿಸಿದ್ದ ಉತ್ತರಗಳಿಗಿಂತ ಬೇರೆಯೇ ಆಗಿವೆ ಎಂದು ಆರೋಪಿಸಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.ಈ ವಿಷಯವನ್ನು ಇಂದು ಬೆಳಿಗ್ಗೆ ನ್ಯಾಯಾಲಯದಲ್ಲಿ ಉಲ್ಲೇಖಿಸಿದ ವಿದ್ಯಾರ್ಥಿಗಳ ಪರ ವಕೀಲರು ಪ್ರಕರಣವನ್ನು ಆದಷ್ಟು ಬೇಗ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿದರು.

ಪ್ರಕರಣದಲ್ಲಿ ಏನಾದರೂ ತುರ್ತು ಇದೆಯೇ ಎಂಬ ನ್ಯಾಯಾಲಯದ ಪ್ರಶ್ನೆಗೆ ಉತ್ತರಿಸಿದ ಅರ್ಜಿದಾರರ ಪರ ವಕೀಲರು,ನೀಟ್ ಕೌನ್ಸೆಲಿಂಗ್ ಪ್ರಕ್ರಿಯೆಯು ಈಗಾಗಲೇ ಪ್ರಗತಿಯಲ್ಲಿದೆ ಮತ್ತು ಅರ್ಜಿಯ ವಿಚಾರಣೆಗೆ ಒಪ್ಪಿಕೊಂಡ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು ‘ನಾವು ಇದನ್ನು ವಿಚಾರಣೆಗೆ ಪಟ್ಟಿ ಮಾಡುತ್ತೇವೆ’ ಎಂದು ತಿಳಿಸಿತು.ಎಲ್ಲ ಆರು ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ 600-650ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ್ದಾರೆ. ಅವರ ಒಎಂಆರ್ ಶೀಟ್‌ಗಳಲ್ಲಿ ಕಂಡುಬಂದಿರುವ ಈ ವ್ಯತ್ಯಾಸಗಳು ಅವರ ವೈದ್ಯಕೀಯ ಪ್ರವೇಶಾವಕಾಶದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ವಕೀಲರು ತಿಳಿಸಿದರು.ತುರ್ತು ವಿಚಾರಣೆಯನ್ನು ಕೋರಿದ ವಕೀಲರು,”ಸಮಸ್ಯೆಯನ್ನು ಪರಿಹರಿಸುವಂತೆ ನಾವು ಎನ್‌ಟಿಗೆ ಹಲವಾರು ಇಮೇಲ್‌ಗಳನ್ನು ಕಳುಹಿಸಿದ್ದೇವೆ. ಅದರ ಕಚೇರಿಗೂ ಭೇಟಿ ನೀಡಿದ್ದೆವು.
ಆದರೆ ಅಲ್ಲಿನ ಅಧಿಕಾರಿಯೋರ್ವರು ನೀವು ಸುಪ್ರೀಂ ಕೋರ್ಟ್‌ಗೆ ಹೋಗಿ,ನಮಗೆ ಅದರ ಬಗ್ಗೆ ಚಿಂತೆಯಿಲ್ಲ’ ಎಂದು ನೇರವಾಗಿ ಹೇಳಿದರು” ಎಂದು ವಕೀಲರು ಪೀಠಕ್ಕೆ ನಿವೇದಿಸಿಕೊಂಡರು.ನೀಟ್ 2026ರ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ನಂತರ ಎನ್‌ಟಿಎ ಪರೀಕ್ಷೆಗಳನ್ನು ನಡೆಸುವ ವಿಧಾನದಲ್ಲಿ ರಚನಾತ್ಮಕ ಸುಧಾರಣೆಗಳನ್ನು ತರಲು ಸರ್ವೋಚ್ಚ ನ್ಯಾಯಾಲಯವು ಪರಿಶೀಲಿಸುತ್ತಿರುವ ಸಂದರ್ಭದಲ್ಲೇ ಈ ಅರ್ಜಿ ಸಲ್ಲಿಕೆಯಾಗಿದೆ. ಎನ್‌ಟಿಎ ವ್ಯಾಪ್ತಿಯಲ್ಲಿ ತಾತ್ಕಾಲಿಕ ಕ್ರಮಗಳ ಬದಲಿಗೆ ಕಾಯಂ ಸುಧಾರಣೆಗಳನ್ನು ತರುವ ಅಗತ್ಯವಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಇತ್ತೀಚೆಗೆ ಒತ್ತಿ ಹೇಳಿತ್ತು.








