
ಹೊಸದಿಲ್ಲಿ: ಕೋಳಿ ಆಹಾರದ ಕೊರತೆ ಮತ್ತು ಉತ್ಪಾದನಾ ವೆಚ್ಚ ಹೆಚ್ಚಿರುವುದರಿಂದ ಭಾರತದಲ್ಲಿ ಡಿಸೆಂಬರ್ ವೇಳೆಗೆ ಕೋಳಿ ಮಾಂಸ ಮತ್ತು ಮೊಟ್ಟೆಯ ಬೆಲೆ ಶೇ.25ರಿಂದ 30ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ.ಕೋಳಿ ಆಹಾರದ ಪ್ರಮುಖ ಪದಾರ್ಥಗಳಾದ ಮೆಕ್ಕೆಜೋಳ ಮತ್ತು ನುಚ್ಚಕ್ಕಿ ದರಗಳಲ್ಲಿ ಭಾರೀ ಏರಿಕೆಯಾಗಿದೆ. ಕೋಳಿ ಆಹಾರದಲ್ಲಿ ಶೇ.55-65ರಷ್ಟು ಬಳಕೆಯಾಗುವ ಮೆಕ್ಕೆಜೋಳದ ಬೆಲೆ ಕಳೆದ ವರ್ಷ ಪ್ರತಿ ಕೆ.ಜಿ.ಗೆ 18 ರೂ. ಇದ್ದದ್ದು ಈಗ 34 ರೂ.ಗೆ ತಲುಪಿದೆ. ಡಿಸೆಂಬರ್ ವೇಳೆಗೆ ಇದು 40 ರೂ.ಗೆ ತಲುಪುವ ಅಂದಾಜಿದೆ. ಕಳೆದ ವರ್ಷ ಪ್ರತಿ ಕೆ.ಜಿ.ಗೆ 14-15 ರೂ. ಇದ್ದ ನುಚ್ಚಕ್ಕಿ ಬೆಲೆಯೂ ಈಗ 31-32 ರೂ.ಗೆ ಏರಿದೆ.ಒಟ್ಟಾರೆಯಾಗಿ ಕೋಳಿ ಆಹಾರದ ಪ್ರಮುಖ ಪದಾರ್ಥಗಳ ಬೆಲೆ ಶೇ.30-45ರಷ್ಟು ಹೆಚ್ಚಾಗಿದೆ.
ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಮಳೆ ಅಭಾವದಿಂದ ಮೆಕ್ಕೆಜೋಳ ಉತ್ಪಾದನೆ ಶೇ.15-16ರಷ್ಟು ಕುಸಿಯುವ ಭೀತಿಯಿದೆ. ಜೊತೆಗೆ, ಎಥನಾಲ್ ಉತ್ಪಾದನೆಗೆ ಮೆಕ್ಕೆಜೋಳದ ಬಳಕೆ ಹೆಚ್ಚಿರುವುದು ಹಾಗೂ ಪರ್ಯಾಯ ಧಾನ್ಯಗಳಾದ ಜೋಳ, ರಾಗಿ ಬೆಲೆಗಳೂ ಏರಿರುವುದು ಪೂರೈಕೆಯ ಸಮಸ್ಯೆಯನ್ನು ತೀವ್ರಗೊಳಿಸಿದೆ.ಮೊಟ್ಟೆಗಳ ಸಗಟು ಬೆಲೆ ಪ್ರಸ್ತುತ ಒಂದಕ್ಕೆ 6-7 ರೂ. ಇದ್ದು, ಡಿಸೆಂಬರ್ ವೇಳೆಗೆ 7-8 ರೂ.ಗೆ ತಲುಪಬಹುದು.ಸ್ಕಿನ್ನೆಸ್ ಕೋಳಿ ಮಾಂಸದ ಸಗಟು ಬೆಲೆ ಪ್ರಸ್ತುತ ಕೆ.ಜಿ.ಗೆ 225-250 ರೂ. ಇದ್ದು, 260-275 ರೂ.ಗೆ ಏರಿಕೆಯಾಗುವ ಸಾಧ್ಯತೆಯಿದೆ.ಸಂಪ್ರದಾಯಿಕವಾಗಿ ಡಿಸೆಂಬರ್ ಮತ್ತು ಜನವರಿ ಪೌಲ್ಟಿ ಉತ್ಪನ್ನಗಳ ಬಳಕೆ ಅತ್ಯಧಿಕವಾಗಿರುವ ತಿಂಗಳುಗಳಾಗಿದ್ದು, ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಯ ವೇಳೆ ಬೇಡಿಕೆ ಹೆಚ್ಚಾಗಿರುತ್ತದೆ. ಆದರೆ, ಹೆಚ್ಚಿನ ಆಹಾರ ವೆಚ್ಚಗಳು ಮತ್ತು ಪೂರೈಕೆ ಕೊರತೆಯಿಂದಾಗಿ ಪೌಲ್ವಿ ಉತ್ಪಾದನೆ ಶೇ.20ಕ್ಕಿಂತ ಹೆಚ್ಚು ಕುಸಿಯಬಹುದು.
ಆದರೆ, ಬೆಲೆಗಳನ್ನು ತೀರಾ ಹೆಚ್ಚಿಸಿದರೆ ಗ್ರಾಹಕರ ಬೇಡಿಕೆ ಕುಸಿಯಬಹುದು ಎಂಬ ಕಾರಣಕ್ಕೆ ಉತ್ಪಾದಕರು ಸಂಪೂರ್ಣ ವೆಚ್ಚದ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸದಿರಬಹುದು.








