

ಇಸ್ರೇಲ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನವನ್ನು ಪತನಗೊಳಿಸಲು ಯತ್ನಿಸಿದ ಆರೋಪದ ಮೇಲೆ ಸಹ-ಪೈಲಟ್ ಹಮಾಮ್ ಅಲ್ಹಮಾಮಿ ಎಂಬಾತನ ಗುರುತು ಪತ್ತೆಯಾಗಿದೆ ಎಂದು ವರದಿಯಾಗಿದೆ.ವಿಮಾನದಲ್ಲಿದ್ದ ಕ್ಯಾಪ್ಟನ್‌ಗೆ ಚಾಕುವಿನಿಂದ ಇರಿದು, ಬಳಿಕ ವಿಮಾನದ ನಿಯಂತ್ರಣವನ್ನು ವಹಿಸಿಕೊಳ್ಳಲು ಯತ್ನಿಸಿದ್ದಾನೆ ಎಂದು ವರದಿಗಳು ತಿಳಿಸಿವೆ.‘ದಿ ವಾಲ್ ಸ್ಟ್ರೀಟ್ ಜರ್ನಲ್’ ವರದಿ ಪ್ರಕಾರ, ಉಗ್ರಗಾಮಿ ಸಿದ್ಧಾಂತದತ್ತ ಒಲವು ಹೊಂದಿರುವ ಶಂಕೆಯ ಹಿನ್ನೆಲೆಯಲ್ಲಿ ಒಮಾನ್ ಅಧಿಕಾರಿಗಳು ಹಮಾಮ್ ಅಲ್ಹಮಾಮಿಗೆ ಈ ಹಿಂದೆ ವಿಮಾನ ಹಾರಾಟ ನಡೆಸದಂತೆ ನಿಷೇಧ ಹೇರಿದ್ದರು ಎನ್ನಲಾಗಿದೆ. ಆದರೆ ಬಳಿಕ ಆತ ಫ್ಲೈದುಬೈ ಸಂಸ್ಥೆಯಲ್ಲಿ ಸಹ-ಪೈಲಟ್ ಆಗಿ ನೇಮಕಗೊಂಡಿದ್ದಾನೆ ಎಂದು ವರದಿ ಹೇಳಿದೆ.


ಈ ಹಿನ್ನೆಲೆಯಲ್ಲಿ, ವಿಮಾನ ಹಾರಾಟದಿಂದಲೇ ನಿಷೇಧಕ್ಕೊಳಗಾಗಿದ್ದ ವ್ಯಕ್ತಿಯೊಬ್ಬರು ಮತ್ತೆ ಪೈಲಟ್ ಆಗಿ ನೇಮಕಗೊಂಡಿದ್ದು ಹೇಗೆ?, ಅವರ ಹಿನ್ನೆಲೆ ಪರಿಶೀಲನೆ ಹೇಗೆ ನಡೆಯಿತು ಎಂಬ ಪ್ರಶ್ನೆಗಳು ಇದೀಗ ಚರ್ಚೆಗೆ ಕಾರಣವಾಗಿವೆ.ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ಹಮಾಮ್ ಅಲ್ಹಮಾಮಿಯ ನೇಮಕಾತಿ ಹಾಗೂ ಹಿಂದಿನ ಭದ್ರತಾ ದಾಖಲೆಗಳ ಕುರಿತು ಹೆಚ್ಚಿನ ಮಾಹಿತಿ ತನಿಖೆಯಿಂದ ಹೊರಬರಬೇಕಿದೆ.








