Tuesday, September 22, 2026
spot_imgspot_img
spot_imgspot_img

ಶಾರ್ಜಾದಲ್ಲಿ ಕುಂದಾಪುರ ಮೂಲದ ವ್ಯಕ್ತಿ ಬರ್ಬರ ಹತ್ಯೆ?ಒಂಭತ್ತು ತುಂಡುಗಳಾಗಿ ಕಾರಿನಲ್ಲಿ ಮೃತದೇಹ ಪತ್ತೆ; ಸಮಗ್ರ ತನಿಖೆಗೆ ಸಹೋದರ ಆಗ್ರಹ

- Advertisement -
- Advertisement -

ಉಡುಪಿ: ಕುಂದಾಪುರ ಮೂಲದ ವ್ಯಕ್ತಿಯೊಬ್ಬರು ಯುಎಇಯ ಶಾರ್ಜಾದಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದಾರೆ ಎನ್ನಲಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೃತರನ್ನು ಕುಂದಾಪುರ ಮೂಲದ ಆಲ್ವಿನ್ ಪ್ರಕಾಶ್ ಕುಂದರ್ ಎಂದು ಗುರುತಿಸಲಾಗಿದೆ.ಪ್ರಕಾಶ್ ಕುಂದರ್ ಅವರು ಕಳೆದ 14 ವರ್ಷಗಳಿಂದ ಶಾರ್ಜಾ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದರು. ಸುಮಾರು 20 ವರ್ಷಗಳ ಹಿಂದೆ ಉಡುಪಿ ಉದ್ಯಾವರ ಬಲಾಯಿಪಾದೆಯ ಟೀನಾ ಕುಂದರ್ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಓರ್ವ ಪುತ್ರನಿದ್ದು, ಆತ ಶಾರ್ಜಾದಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಟೀನಾ ಕೂಡ ಶಾರ್ಜಾದಲ್ಲಿ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.ಕಳೆದ ಡಿಸೆಂಬರ್‌ನಲ್ಲಿ ಊರಿಗೆ ಬಂದಿದ್ದ ಪ್ರಕಾಶ್ ಬಳಿಕ ಶಾರ್ಜಾಕ್ಕೆ ಮರಳಿದ್ದರು. ಆದರೆ ಜುಲೈ 20ರಂದು ಸಹೋದರ ಅನಿಲ್ ಪ್ರಶಾಂತ್ ಕುಂದರ್ ಕರೆ ಮಾಡಿದಾಗ ಪ್ರಕಾಶ್ ಕರೆ ಸ್ವೀಕರಿಸಿರಲಿಲ್ಲ.

ಬದಲಾಗಿ, ಎಂದಿಗೂ ಮಾಡದ ರೀತಿಯಲ್ಲಿ ಟೈಪಿಂಗ್ ಮೆಸೇಜ್ ಮೂಲಕ ತಾನು ಕ್ಷೇಮವಾಗಿರುವುದಾಗಿ ತಿಳಿಸಿದ್ದರು. ಬಳಿಕ ಹಲವು ಬಾರಿ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಕುಟುಂಬದವರಿಗೆ ಅನುಮಾನ ಮೂಡಿತ್ತು.

ಈ ಹಿನ್ನೆಲೆಯಲ್ಲಿ ಶಾರ್ಜಾದಲ್ಲಿದ್ದ ಪ್ರಕಾಶ್ ಅವರ ಸಹಪಾಠಿ ಮನೋಹರ್ ಅವರನ್ನು ಸಂಪರ್ಕಿಸಿ ವಿಚಾರಿಸುವಂತೆ ತಿಳಿಸಲಾಗಿತ್ತು. ಮನೋಹರ್ ಪ್ರಕಾಶ್ ಕಂಪೆನಿ ನೀಡಿದ್ದ ಫ್ಲ್ಯಾಟ್‌ಗೆ ತೆರಳಿದಾಗ, ವಾಚ್‌ಮೆನ್ ಅವರು ಭಾರತಕ್ಕೆ ತೆರಳಿದ್ದಾರೆ ಎಂದು ಮಾಹಿತಿ ನೀಡಿದ್ದರು. ಬಳಿಕ ಅನಿಲ್ ಅವರು ಪ್ರಕಾಶ್ ಕೆಲಸ ಮಾಡುತ್ತಿದ್ದ ಕಂಪೆನಿಯ ಎಚ್‌ಆರ್‌ಗೆ ಕರೆ ಮಾಡಿದಾಗಲೂ ಅವರು ಭಾರತಕ್ಕೆ ತೆರಳಿದ್ದಾರೆ ಎಂದು ತಿಳಿಸಿದ್ದರು.

ಆದರೆ ಪ್ರಕಾಶ್ ಭಾರತಕ್ಕೆ ಬಂದಿಲ್ಲ ಎಂಬುದನ್ನು ತಿಳಿಸಿ ಮತ್ತೊಮ್ಮೆ ಪರಿಶೀಲಿಸುವಂತೆ ಮನವಿ ಮಾಡಲಾಗಿತ್ತು. ಬಳಿಕ ಪಾಸ್‌ಪೋರ್ಟ್ ಪರಿಶೀಲಿಸಿದಾಗ ಪ್ರಕಾಶ್ ಶಾರ್ಜಾದಲ್ಲೇ ಇರುವುದಾಗಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ನಾಪತ್ತೆ ಪ್ರಕರಣದ ಕುರಿತು ದೂರು ನೀಡಲಾಗಿತ್ತು.ತನಿಖೆ ವೇಳೆ ಒಮನ್‌ಗೆ ತೆರಳುವ ಮಾರ್ಗದ ಬದಿಯಲ್ಲಿ ಕಾರೊಂದರಲ್ಲಿ ಎರಡು ಬ್ಯಾಗ್‌ಗಳಲ್ಲಿ ಒಂಭತ್ತು ತುಂಡುಗಳಾಗಿ ತುಂಬಿಸಿಡಲಾಗಿದ್ದ ಮೃತದೇಹ ಪತ್ತೆಯಾಗಿದೆ ಎಂದು ಸಹೋದರ ಅನಿಲ್ ಪ್ರಶಾಂತ್ ತಿಳಿಸಿದ್ದಾರೆ.

ಬಳಿಕ ಮೃತದೇಹ ಪ್ರಕಾಶ್ ಅವರದ್ದೇ ಎಂಬುದು ದೃಢಪಟ್ಟಿದ್ದು, ಮರಣೋತ್ತರ ಪರೀಕ್ಷೆಯ ವರದಿ ನಿನ್ನೆಯಷ್ಟೇ ಕುಟುಂಬದ ಕೈ ಸೇರಿದೆ ಎಂದು ಅವರು ಹೇಳಿದ್ದಾರೆ.ಎಸ್ಪಿಗೆ ಮನವಿಘಟನೆಗೆ ಸಂಬಂಧಿಸಿ ಮೃತರ ಸಹೋದರ ಅನಿಲ್ ಪ್ರಶಾಂತ್ ಕುಂದರ್ ಅವರು ಸೆ.22ರಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ, ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಪ್ರಕಾಶ್ ಅವರ ಪತ್ನಿ ಮತ್ತು ಮಗ ಪ್ರಸ್ತುತ ಶಾರ್ಜಾದಲ್ಲಿ ಇಲ್ಲ. ಅವರು ಭಾರತಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದ್ದು, ಸದ್ಯ ಎಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆಯೂ ತನಿಖೆ ನಡೆಸುವಂತೆ ಅನಿಲ್ ಪ್ರಶಾಂತ್ ಮನವಿ ಮಾಡಿದ್ದಾರೆ.

ಅಧಿಕೃತ ದೃಢೀಕರಣ ಇಲ್ಲ:

ಉಡುಪಿ ಎಸ್ಪಿಈ ನಡುವೆ, ಘಟನೆ ಕುರಿತು ಯುಎಇಯ ಶಾರ್ಜಾ ಪೊಲೀಸ್ ಇಲಾಖೆ ಅಥವಾ ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿ/ಕಾನ್ಸುಲೇಟ್‌ನಿಂದ ಉಡುಪಿ ಜಿಲ್ಲಾ ಪೊಲೀಸರಿಗೆ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಅಥವಾ ದೃಢೀಕರಣ ಬಂದಿಲ್ಲ ಎಂದು ಉಡುಪಿ ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.“ಉಡುಪಿ ಮೂಲದ ವ್ಯಕ್ತಿಯೊಬ್ಬರು ಯುಎಇಯ ಶಾರ್ಜಾದಲ್ಲಿ ಹತ್ಯೆಯಾಗಿದ್ದಾರೆ ಎಂಬ ವರದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ.

ಆದರೆ ಈ ಘಟನೆಗೆ ಸಂಬಂಧಿಸಿ ಶಾರ್ಜಾ ಪೊಲೀಸ್ ಇಲಾಖೆ ಅಥವಾ ಭಾರತೀಯ ರಾಯಭಾರ ಕಚೇರಿ/ಕಾನ್ಸುಲೇಟ್ ವತಿಯಿಂದ ಯಾವುದೇ ಅಧಿಕೃತ ಮಾಹಿತಿ ಅಥವಾ ದೃಢೀಕರಣ ಲಭ್ಯವಾಗಿಲ್ಲ” ಎಂದು ಅವರು ತಿಳಿಸಿದ್ದಾರೆ.

- Advertisement -

Related news

error: Content is protected !!