Monday, July 27, 2026
spot_imgspot_img
spot_imgspot_img

ಸಾರ್ವಜನಿಕ ಪರೀಕ್ಷಾ ಅಕ್ರಮಗಳಿಗೆ ಬ್ರೇಕ್: ಕಠಿಣ ಶಿಕ್ಷೆ ಮಸೂದೆ ಲೋಕಸಭೆಯಲ್ಲಿ ಮಂಡನೆ

- Advertisement -
- Advertisement -


ಹೊಸದಿಲ್ಲಿ, ಜು. 26: ಕೇಂದ್ರ ಸರ್ಕಾರವು ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ವಿಧಾನಗಳ ತಡೆ) ತಿದ್ದುಪಡಿ ಮಸೂದೆ, 2026 ಅನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಿದೆ.

ಸಾರ್ವಜನಿಕ ಪರೀಕ್ಷೆಗಳಿಗೆ ಸಂಬಂಧಿಸಿದ ಗಂಭೀರ ಅಪರಾಧಗಳಿಗೆ ಕಠಿಣ ಶಿಕ್ಷೆ, ಕಾಲಮಿತಿಯೊಳಗೆ ತನಿಖೆ ಹಾಗೂ ವಿಚಾರಣೆ ಮತ್ತು ತನಿಖೆಗೆ ವಿಶೇಷ ಕಾರ್ಯಪಡೆ ರಚನೆಯನ್ನು ಈ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

ಲೋಕಸಭಾ ಕಾರ್ಯದರ್ಶಿಯವರ ಪ್ರಕಾರ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಕೆಲವೇ ತಾಸುಗಳ ಮುನ್ನ ಕರಡು ಮಸೂದೆಯ ಪ್ರತಿಗಳನ್ನು ಸಂಸದರಿಗೆ ವಿತರಿಸಲಾಗಿತ್ತು.

ಸಾರ್ವಜನಿಕ ಪರೀಕ್ಷೆಗಳಲ್ಲಿ ಅವ್ಯವಹಾರಗಳನ್ನು ತಡೆಗಟ್ಟುವ ಹಾಗೂ ನ್ಯಾಯಯುತ ಮತ್ತು ಪಾರದರ್ಶಕವಾಗಿ ಅವುಗಳನ್ನು ನಿರ್ವಹಿಸುವ ಉದ್ದೇಶದಿಂದ 2024ರಲ್ಲಿ ಜಾರಿಗೊಳಿಸಲಾದ ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ವಿಧಾನಗಳ ತಡೆ) ಕಾಯ್ದೆಯನ್ನು ಈ ಮಸೂದೆಯು ತಿದ್ದುಪಡಿಗೊಳಿಸಲಿದೆ.

ಇತ್ತೀಚೆಗೆ NEET ಸೇರಿದಂತೆ ಪ್ರಶ್ನೆಪತ್ರಿಕೆ ಸೋರಿಕೆ ಹಗರಣಗಳು ಹಾಗೂ ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದ ಘಟನೆಗಳು ಬಯಲಿಗೆ ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತಿದ್ದುಪಡಿಗಳನ್ನು ಪ್ರಸ್ತಾವಿಸಿದೆ.

ತಿದ್ದುಪಡಿಯಲ್ಲಿ ಏನಿದೆ?

ಪ್ರಸ್ತಾವಿತ ಕಾನೂನಿನ ಪ್ರಕಾರ, ಸಾರ್ವಜನಿಕ ಪರೀಕ್ಷೆಗಳಲ್ಲಿ ಅಕ್ರಮ ವಿಧಾನಗಳಿಗೆ ಮೊರೆಹೋಗುವ ವ್ಯಕ್ತಿಗಳಿಗೆ ಐದರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆಯಾಗಲಿದೆ. ಪ್ರಸಕ್ತ ಇಂತಹ ಅಪರಾಧಗಳಿಗೆ ಮೂರರಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ದಂಡದ ಗರಿಷ್ಠ ಮಿತಿಯನ್ನು 10 ಲಕ್ಷ ರೂ.ಗಳಿಂದ 50 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.

ಪರೀಕ್ಷೆಗಳ ನಿರ್ವಹಣೆಯಲ್ಲಿ ಒಳಗೊಂಡಿರುವ ಸೇವಾದಾರರು ಇಂತಹ ಅಕ್ರಮಗಳಲ್ಲಿ ಶಾಮೀಲಾಗಿರುವುದು ದೃಢಪಟ್ಟಲ್ಲಿ ಅವರಿಗೆ ಭಾರೀ ಮೊತ್ತದ ದಂಡ ವಿಧಿಸಲು ಮಸೂದೆ ಪ್ರಸ್ತಾಪಿಸಿದೆ. ದಂಡದ ಗರಿಷ್ಠ ಮೊತ್ತವನ್ನು 1 ಕೋಟಿ ರೂ.ನಿಂದ 5 ಕೋಟಿ ರೂ.ಗೆ ಏರಿಸಲಾಗಿದೆ. ಲೋಪ ಎಸಗಿದ ಸೇವಾದಾರರಿಗೆ ಸಾರ್ವಜನಿಕ ಪರೀಕ್ಷೆಗಳನ್ನು ನಿರ್ವಹಿಸುವುದನ್ನು ನಿಷೇಧಿಸುವ ಅವಧಿಯನ್ನು ನಾಲ್ಕು ವರ್ಷಗಳಿಂದ ಎಂಟು ವರ್ಷಗಳಿಗೆ ಹೆಚ್ಚಿಸಲಾಗಿದೆ.

ಅಪರಾಧಗಳಲ್ಲಿ ಶಾಮೀಲಾದ ಹಿರಿಯ ನಿರ್ದೇಶಕರು, ಹಿರಿಯ ಆಡಳಿತವರ್ಗ ಹಾಗೂ ಉಸ್ತುವಾರಿ ಸೇವಾದಾರರಿಗೆ ಶಿಕ್ಷೆಯ ಅವಧಿಯನ್ನು ಐದು ವರ್ಷಗಳಿಂದ ಏಳು ವರ್ಷಗಳಿಗೆ ಏರಿಸಲಾಗಿದೆ. ದಂಡದ ಕನಿಷ್ಠ ಮೊತ್ತವನ್ನು 1 ಕೋಟಿ ರೂ.ನಿಂದ 10 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.

ಅಗತ್ಯವಿದ್ದಲ್ಲಿ, ಈ ಕಾಯ್ದೆಯಡಿ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ರಚಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡಲಾಗಿದೆ. ಅಲ್ಲದೆ ಕಾಲಮಿತಿಯೊಳಗೆ ಪ್ರಕರಣಗಳ ತನಿಖೆ ಪೂರ್ಣಗೊಳಿಸುವುದನ್ನೂ ಮಸೂದೆ ಪ್ರಸ್ತಾಪಿಸಿದೆ. ಪೊಲೀಸರು, ಕೇಂದ್ರೀಯ ತನಿಖಾ ಏಜೆನ್ಸಿ ಅಥವಾ ಪ್ರಸ್ತಾವಿತ ವಿಶೇಷ ಕಾರ್ಯಪಡೆ (ಎಸ್‌ಟಿಎಫ್‌) ಸಾರ್ವಜನಿಕ ಪರೀಕ್ಷೆಗಳಿಗೆ ಸಂಬಂಧಿಸಿದ ಅಪರಾಧ ಪ್ರಕರಣಗಳ ತನಿಖೆಯನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸಬೇಕಾಗುತ್ತದೆ.

- Advertisement -

Related news

error: Content is protected !!