Friday, July 24, 2026
spot_imgspot_img
spot_imgspot_img

ಅಕ್ರಮವಾಗಿ ಜಾನುವಾರು ಸಾಗಾಟ: ಮೂವರು ಆರೋಪಿಗಳ ಬಂಧನ

- Advertisement -
- Advertisement -

ಸುಳ್ಯ, ಮಾ.26: ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಸುಳ್ಯ ಪೊಲೀಸರು ಪತ್ತೆಹಚ್ಚಿ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ನಡೆದಿದೆ.

ದಿನಾಂಕ 26.03.2026 ರಂದು ಬೆಳಗ್ಗಿನ ಜಾವ ಸುಳ್ಯ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಸಂತೋಷ್ ಬಿ.ಪಿ ಅವರು ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ, ಸುಳ್ಯ ಆಲೆಟ್ಟಿ ಕ್ರಾಸ್ ಬಳಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ KL 59 D 2979 ನಂಬರಿನ ಬೊಲೆರೊ ಪಿಕಪ್ ವಾಹನವನ್ನು ತಡೆದಿದ್ದಾರೆ. ನಂತರ ಆಲೆಟ್ಟಿ ಗ್ರಾಮದ ಮಿತ್ತಡ್ಕ ರೋಟರಿ ಶಾಲೆ ಬಳಿ ವಾಹನವನ್ನು ನಿಲ್ಲಿಸಿ ಪರಿಶೀಲನೆ ನಡೆಸಲಾಗಿದೆ.

ಈ ವೇಳೆ ವಾಹನದಲ್ಲಿದ್ದ ಒಬ್ಬ ವ್ಯಕ್ತಿ ಪರಾರಿಯಾಗಿದ್ದು, ಚಾಲಕನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಆತ ಕೇರಳದ ಕಣ್ಣೂರು ನಿವಾಸಿ ಇಸಾಕ್ ಕೆ.ಕೆ (40) ಎಂದು ತಿಳಿದುಬಂದಿದೆ. ವಾಹನವನ್ನು ಪರಿಶೀಲಿಸಿದಾಗ, ಮೂರು ಜಾನುವಾರುಗಳನ್ನು ಹಿಂಸಾತ್ಮಕವಾಗಿ ತುಂಬಿಸಿ ಸಾಗಿಸುತ್ತಿರುವುದು ಪತ್ತೆಯಾಗಿದೆ.ವಿಚಾರಣೆಯಲ್ಲಿ, ಅಮರ ಪಡನೂರು ಗ್ರಾಮದ ಸಂತೋಷ್ ಎಂ.ಎಸ್ (48) ಅವರ ಜಾನುವಾರುಗಳನ್ನು ಸುಳ್ಯ ನಿವಾಸಿ ಇಬ್ರಾಹಿಂ ಎ.ಎಂ (32) ಅವರ ಮೂಲಕ ಖರೀದಿಸಿ, ಅಗತ್ಯ ಪರವಾನಿಗೆ ಪಡೆಯದೇ ವಧೆ ಉದ್ದೇಶಕ್ಕಾಗಿ ಸಾಗಿಸಲಾಗುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ.

ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 39/2026 ಅಡಿಯಲ್ಲಿ ಕರ್ನಾಟಕ ಗೋವಧೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ-2020ರ ಕಲಂಗಳು 4, 5, 6, 7, 12, ಹಾಗೂ ಪ್ರಿವೆನ್ಷನ್ ಆಫ್ ಕ್ರೂಯೆಲ್ಟಿ ಟು ಅನಿಮಲ್ಸ್ ಕಾಯ್ದೆ 1960ರ ಕಲಂ 11(1)(ಡಿ) ಮತ್ತು ಭಾರತೀಯ ನ್ಯಾಯ ಸಂಹಿತೆಯ ಕಲಂ 303(2) ಅನ್ವಯ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!