Saturday, July 18, 2026
spot_imgspot_img
spot_imgspot_img

ದೇವಸ್ಥಾನದ ಹೆಸರಲ್ಲಿ ನಕಲಿ ಲಾಟರಿ ಟಿಕೆಟ್ ಮಾರಾಟ: ಒಂದು ವರ್ಷದ ಬಳಿಕ ಪ್ರಕರಣ ಭೇದಿಸಿದ ಪೊಲೀಸರು

- Advertisement -
- Advertisement -

ಭಟ್ಕಳ: ಮುರುಡೇಶ್ವರ ದೇವಸ್ಥಾನದ ಹೆಸರನ್ನು ದುರುಪಯೋಗಪಡಿಸಿಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ “ಶ್ರೀ ಮುರುಡೇಶ್ವರ ಅದೃಷ್ಟ ಡ್ರಾ” ಹೆಸರಿನಲ್ಲಿ ನಕಲಿ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡಿ ಸಾರ್ವಜನಿಕರಿಗೆ ವಂಚನೆ ಎಸಗಿದ ಪ್ರಕರಣದಲ್ಲಿ ಸುಮಾರು ಒಂದು ವರ್ಷದ ತನಿಖೆಯ ಬಳಿಕ ಮುರುಡೇಶ್ವರ ಪೊಲೀಸರು ಆರೋಪಿಯನ್ನು ಗುರುವಾರ ಬಂಧಿಸಿದ್ದಾರೆ. ಬಂಧಿತನನ್ನು ಬೀದರ ಜಿಲ್ಲೆಯ ಬಾಲ್ಕಿ ತಾಲ್ಲೂಕಿನ ಸಾಲಖನಗಾಂವ ನಿವಾಸಿ ನರಸಿಂಗ್ ವೆಂಕಟರಾವ್ ತಗರಖೇಡೆ (32) ಎಂದು ಗುರುತಿಸಲಾಗಿದೆ.

ಆರೋಪಿ ಮುರುಡೇಶ್ವರ ದೇವಸ್ಥಾನದ ಭಾವಚಿತ್ರ ಬಳಸಿ “ಶ್ರೀ ಮುರುಡೇಶ್ವರ ಅದೃಷ್ಟ ಡ್ರಾ” ಹೆಸರಿನ ನಕಲಿ ಕರಪತ್ರಗಳನ್ನು ಸೃಷ್ಟಿಸಿದ್ದಲ್ಲದೆ, ನಕಲಿ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ಖಾತೆಗಳ ಮೂಲಕ ಲಕ್ಕಿ ಡ್ರಾ ನಡೆಯುತ್ತಿದೆ ಎಂದು ಸುಳ್ಳು ಪ್ರಚಾರ ನಡೆಸಿ ಸಾರ್ವಜನಿಕರಿಂದ ಹಣ ಪಡೆದು ವಂಚನೆ ಎಸಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಮುರುಡೇಶ್ವರ ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಮದನ ಶೆಟ್ಟಿ (73) ಅವರು 2025ರ ಆಗಸ್ಟ್‌ 6ರಂದು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳೆದ ಒಂದು ವರ್ಷದಿಂದ ತನಿಖೆ ನಡೆಸುತ್ತಿದ್ದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎನ್.ಎಂ., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಜಿ., ಡಿವೈಎಸ್ಪಿ ಗಿರೀಶ ಬಿ. ಹಾಗೂ ಸಿಪಿಐ ಜಗದೀಶ ಹಂಚಿನಾಳ ಅವರ ಮಾರ್ಗದರ್ಶನದಲ್ಲಿ, ಪಿಎಸ್‌ಐ ಹಣಮಂತ ಬಿರಾದಾರ ಮತ್ತು ಪಿಎಸ್‌ಐ ಲೋಕನಾಥ ರಾಥೋಡ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.

ತಂಡವು ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಬೀದರ ಜಿಲ್ಲೆಗಳಲ್ಲಿ ಆರೋಪಿಯ ಸುಳಿವು ಪತ್ತೆಹಚ್ಚಿ ನಿರಂತರ ಕಾರ್ಯಾಚರಣೆ ನಡೆಸಿ ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಯಿತು.

ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪ್ರಕರಣದ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಹೆಚ್ಚಿನ ತನಿಖೆ ಮುಂದುವರಿದಿದೆ.

- Advertisement -

Related news

error: Content is protected !!