

ಹೊಸದಿಲ್ಲಿ: ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್ಎಂಸಿ) ಪ್ರತಿಯೊಬ್ಬ ನೋಂದಾಯಿತ ವೈದ್ಯಕೀಯ ವೃತ್ತಿಪರರಿಗೆ ಕೇಂದ್ರ ಮಟ್ಟದಲ್ಲಿ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನೀಡುವುದನ್ನು ಪ್ರಸ್ತಾವಿಸಿದೆ. ಇದರಿಂದ ವೈದ್ಯರು ಹೊಸ ನೋಂದಣಿ ಅಥವಾ ಪರವಾನಿಗೆ ಪಡೆಯದೆ ದೇಶದ ಯಾವುದೇ ಭಾಗದಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ.ವ್ಯಕ್ತಿಯೋರ್ವ ರಾಜ್ಯ ವೈದ್ಯಕೀಯ ರಿಜಿಸ್ಟರ್ನಲ್ಲಿ ನೋಂದಾಯಿಸಿಕೊಂಡ ಬಳಿಕ ಎನ್ಎಂಸಿಯ ಎಥಿಕ್ಸ್ ಆಂಡ್ ಮೆಡಿಕಲ್ ರಿಜಿಸ್ಟ್ರೇಷನ್ ಬೋರ್ಡ್ (ಇಎಂಆರ್ಬಿ) ಕೇಂದ್ರ ಮಟ್ಟದಲ್ಲಿ ವಿಶಿಷ್ಟ ಗುರುತು (ಯುಐಡಿ) ಸಂಖ್ಯೆಯನ್ನು ಸೃಷ್ಟಿಸುತ್ತದೆ.


ಇದು ರಾಷ್ಟ್ರೀಯ ವೈದ್ಯಕೀಯ ರಿಜಿಸ್ಟರ್ ನಲ್ಲಿ (ಎನ್ಎಂಆರ್) ನೋಂದಣಿಯನ್ನು ಕಲ್ಪಿಸಿ ದೇಶಾದ್ಯಂತ ವೈದ್ಯಕೀಯ ವೃತ್ತಿ ನಡೆಸಲು ಅರ್ಹತೆ ನೀಡುತ್ತದೆ.ಯುಐಡಿಯು ಸಂಬಂಧಿತ ರಾಜ್ಯ/ಕೇಂದ್ರಾಡಳಿತ ಪ್ರದೇಶದ ಕೋಡ್ ಮತ್ತು ರಾಜ್ಯ ರಿಜಿಸ್ಟರ್ ನೀಡಿದ ನೋಂದಣಿ ಸಂಖ್ಯೆಯನ್ನು ಒಳಗೊಂಡಿರುತ್ತದೆ. ರಾಜ್ಯ ಮತ್ತು ರಾಷ್ಟ್ರೀಯ ರಿಜಿಸ್ಟರ್ಗಳ ನಡುವೆ ಡೇಟಾವನ್ನು ಸ್ವಯಂಚಾಲಿತವಾಗಿ ಅಪ್ಲೇಟ್ ಮಾಡಲಾಗುತ್ತದೆ.
ವೈದ್ಯರ ವಿರುದ್ಧದ ದೂರುಗಳು, ಅಮಾನತು ಅಥವಾ ಪರವಾನಿಗೆ ರದ್ದತಿಯಂತಹ ಮಾಹಿತಿಗಳು ಎನ್ಎಂಆರ್ ನಲ್ಲಿ ದಾಖಲಾಗುತ್ತವೆ. ಯಾವುದೇ ರಾಜ್ಯದಲ್ಲಿ ಶಿಸ್ತಿನ ಕ್ರಮ ಜರುಗಿಸಿದರೂ ಅದು ರಾಷ್ಟ್ರೀಯ ರಿಜಿಸ್ಟರ್ ನಲ್ಲಿ ತಕ್ಷಣವೇ ಬಿಂಬಿತವಾಗುತ್ತದೆ.ವೈದ್ಯರು ಇಎಂಆರ್ಬಿಯ ಏಕೀಕೃತ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು. ರಾಜ್ಯ ಕೌನ್ಸಿಲ್ 30 ದಿನಗಳ ಒಳಗೆ ಅರ್ಜಿಯನ್ನು ಪ್ರಕ್ರಿಯೆಗೊಳಿಸುತ್ತದೆ.
ವೃತ್ತಿಪರ ಪರವಾನಿಗೆಯು 5 ವರ್ಷಗಳ ಕಾಲ ಮಾನ್ಯವಾಗಿರುತ್ತದೆ. ಅವಧಿ ಮುಗಿದ 3 ತಿಂಗಳೊಳಗೆ ನವೀಕರಿಸದಿದ್ದರೆ ಪರವಾನಿಗೆಯು ನಿಷ್ಕ್ರಿಯಗೊಳ್ಳುತ್ತದೆ.ಈಗಾಗಲೇ ನೋಂದಾಯಿತ ವೈದ್ಯರಿಗೆ ಒಂದು ಸಲದ ಪ್ರಕ್ರಿಯೆಯಾಗಿ ಯುಐಡಿಯನ್ನು ನೀಡಲಾಗುತ್ತದೆ. ಇದಕ್ಕಾಗಿ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ.ಅಗತ್ಯ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದೇಶಿ ವೈದ್ಯಕೀಯ ಪದವೀಧರರೂ ಎನ್ಎಂಆರ್ ನಲ್ಲಿ ನೋಂದಾಯಿಸಿಕೊಳ್ಳಲು ಅರ್ಹರಾಗಿರುತ್ತಾರೆ.
ರಾಜ್ಯ ಕೌನ್ಸಿಲ್ ನೋಂದಣಿ ಅಥವಾ ಪರವಾನಿಗೆ ನವೀಕರಣವನ್ನು ತಿರಸ್ಕರಿಸಿದರೆ ಅರ್ಜಿದಾರರು 30 ದಿನಗಳ ಒಳಗೆ ಇಎಂಆರ್ಬಿಗೆ ಮೇಲ್ಮನವಿ ಸಲಿಸಬಹುದು.ಎನ್ಎಂಸಿಯು ಈ ಕರಡು ನಿಯಮಾವಳಿಗಳ ಕುರಿತು ಸಾರ್ವಜನಿಕರು ಹಾಗೂ ಭಾಗಿದಾರರಿಂದ ಸಲಹೆ ಮತ್ತು ಆಕ್ಷೇಪಗಳನ್ನು ಆಹ್ವಾನಿಸಿದೆ.








