
ಮಂಗಳೂರು: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ದಿನಾಂಕ 11.01.2026ರಂದು ಸಂಜೆ 6.05 ಗಂಟೆ ಸುಮಾರಿಗೆ, ನಾಲ್ವರು ಆರೋಪಿತರು ದೂರುದಾರರನ್ನು ತಡೆದು ನಿಲ್ಲಿಸಿ “ನೀನು ಹಿಂದೂನಾ, ಮುಸ್ಲಿಂನಾ” ಎಂದು ಪ್ರಶ್ನಿಸಿ, “ನೀನು ಬಾಂಗ್ಲಾದೇಶದವನು” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಸಾರಣಿ ಮಾಡುವ ಕರಣಿ (ತಾಪಿ) ಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಆರೋಪದ ಮೇರೆಗೆ ಪ್ರಕರಣ ದಾಖಲಾಗಿತ್ತು.ಈ ಸಂಬಂಧ ದಿನಾಂಕ 12.01.2026ರಂದು ಕಾವೂರು ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಸಂಖ್ಯೆ 03/2026 ರಂತೆ ಭಾರತೀಯ ನ್ಯಾಯ ಸಂಹಿತೆ–2023ರ ಕಲಂಗಳು 126(2), 352, 351(3), 353, 109, 118(1) ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಂಧಿತ ಆರೋಪಿಗಳನ್ನು ಕೂಳೂರು ನಿವಾಸಿಗಳಾದ ರತೀಶ್ ದಾಸ್ (32),ಧನುಷ್ (24) ,ಸಾಗರ್ (24) ಎಂದು ತಿಳಿದು ಬಂದಿದೆ.
ಬಂಧನ ಕಾರ್ಯಾಚರಣೆಯಲ್ಲಿ ಮಂಗಳೂರು ಉತ್ತರ ಉಪವಿಭಾಗದ ಎ.ಸಿ.ಪಿ ಶ್ರೀಕಾಂತ್ ಕೆ. ರವರ ಮಾರ್ಗದರ್ಶನದಲ್ಲಿ, ಕಾವೂರು ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಘವೇಂದ್ರ ಎಂ. ಬೈಂದೂರು, ಪೊಲೀಸ್ ಉಪನಿರೀಕ್ಷಕ ಮಲ್ಲಿಕಾರ್ಜುನ ಬಿರಾದಾರ, ಎ.ಎಸ್.ಐ ಚಂದ್ರಹಾಸ್, ಹೆಡ್ ಕಾನ್ಸ್ಟೇಬಲ್ ಸನೀಲ್ ಮತ್ತು ಬಾಲಕೃಷ್ಣ, ಹಾಗೂ ಸಿಬ್ಬಂದಿಗಳಾದ ರಾಘವೇಂದ್ರ, ರಿಯಾಜ್, ನಾಗರಾಜ್, ಹನುಮಂತ ರವರ ತಂಡ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.








