Sunday, September 6, 2026
spot_imgspot_img
spot_imgspot_img

ಕೋಟೆತ್ತಡ್ಕ ಕೆಂಪುಕಲ್ಲು ಕೋರೆಯ ವಿರುದ್ಧ ಸ್ಥಳೀಯರ ದೂರುಮನೆ ನಿವೇಶನಕ್ಕೂ ಕುತ್ತು; ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮವಿಲ್ಲವೆಂದು ಆರೋಪ

- Advertisement -
- Advertisement -

ವಿಟ್ಲ: ಅಳಿಕೆ ಗ್ರಾಮದ ಕೋಟೆತ್ತಡ್ಕ ಎಂಬ ಅತೀ ಎತ್ತರದ ಪ್ರದೇಶದಲ್ಲಿ ಹಲವು ವರ್ಷಗಳಿಂದ ನಡೆಯುತ್ತಿರುವ ಕೆಂಪುಕಲ್ಲು ಗಣಿಗಾರಿಕೆಯಿಂದ ಸ್ಥಳೀಯ ಪರಿಸರ ಹಾಗೂ ನಿವಾಸಿಗಳಿಗೆ ಆತಂಕ ಎದುರಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಎಗ್ಗಿಲ್ಲದೆ ನಡೆಯುತ್ತಿರುವ ಕೆಂಪುಕಲ್ಲು ಗಣಿಗಾರಿಕೆಯಿಂದ ಗುಡ್ಡದ ಕೆಳಭಾಗದಲ್ಲಿ ವಾಸಿಸುತ್ತಿರುವ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇದೇ ರೀತಿ ಗಣಿಗಾರಿಕೆ ಮುಂದುವರಿದರೆ ವಯನಾಡು ಹಾಗೂ ಮಡಿಕೇರಿಯಲ್ಲಿ ಸಂಭವಿಸಿದಂತಹ ಅನಾಹುತ ಇಲ್ಲಿಯೂ ಸಂಭವಿಸಬಹುದು ಎಂಬ ಆತಂಕ ಸ್ಥಳೀಯರನ್ನು ಕಾಡುತ್ತಿದೆ.ಈ ಕುರಿತು ಹಲವು ಬಾರಿ ಗ್ರಾಮ ಪಂಚಾಯಿತಿ, ಗಣಿ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮನೆ ನಿವೇಶನಕ್ಕೂ ಕುತ್ತು: ಸರಕಾರಿ ಜಮೀನಿನಲ್ಲಿ ಮನೆ ನಿವೇಶನಕ್ಕಾಗಿ ಮೀಸಲಿಟ್ಟಿರುವ ಸುಮಾರು ಮೂರು ಎಕರೆ ಪ್ರದೇಶದಲ್ಲಿಯೂ ಕೆಂಪುಕಲ್ಲು ಗಣಿಗಾರಿಕೆ ನಡೆಸಲಾಗಿದ್ದು, ಆಳವಾದ ಕಂದಕಗಳು ನಿರ್ಮಾಣವಾಗಿವೆ. ಹಕ್ಕುಪತ್ರ ಪಡೆದವರಿಗೆ ಮನೆ ನಿರ್ಮಿಸಲು ಸೂಕ್ತ ಜಾಗವೇ ಇಲ್ಲದಂತಾಗಿದೆ. ಸುಮಾರು 20 ಅಡಿ ಆಳದ ಗುಂಡಿಗಳನ್ನು ಮುಚ್ಚಿ ಮನೆ ನಿರ್ಮಿಸುವುದು ಕಷ್ಟವಾಗಿದ್ದು, ಈ ಸ್ಥಳ ಮನೆ ನಿವೇಶನಕ್ಕೆ ಯೋಗ್ಯವಲ್ಲ ಎಂಬ ದೃಢೀಕರಣ ಪತ್ರವನ್ನು ತಾಲೂಕು ಸಹಾಯಕ ಎಂಜಿನಿಯರ್‌ಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ನೀಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಇನ್ನು ಹಗಲು-ರಾತ್ರಿ ಎನ್ನದೆ ಕೆಂಪುಕಲ್ಲು ಸಾಗಿಸುವ ಲಾರಿಗಳು ಸಂಚರಿಸುತ್ತಿರುವುದರಿಂದ ರಸ್ತೆಯ ಸ್ಥಿತಿಯೂ ಶೋಚನೀಯವಾಗಿದೆ.

ಈ ಎಲ್ಲ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸ್ಥಳೀಯರ ಆತಂಕವನ್ನು ಪರಿಗಣಿಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

- Advertisement -

Related news

error: Content is protected !!