



ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಹೆಸರು ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಖ್ಯಾತ ಬಹುಭಾಷಾ ನಟ Prakash Raj ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಗಾಳಿಸುದ್ದಿಗಳು ಮತ್ತು ಆಧಾರರಹಿತ ಊಹಾಪೋಹಗಳನ್ನು ನಂಬದಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.“ಧರ್ಮಸ್ಥಳ ಪ್ರಕರಣದ ಕುರಿತಂತೆ ನನ್ನ ಬಗ್ಗೆ ಕೆಲವು ಸುದ್ದಿಗಳು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ.

ಇದು ಅತ್ಯಂತ ಸೂಕ್ಷ್ಮವಾದ ಹಾಗೂ ಕೋಟ್ಯಂತರ ಭಕ್ತರ ನಂಬಿಕೆಗೆ ಸಂಬಂಧಿಸಿದ ಪ್ರಕರಣವಾಗಿರುವುದರಿಂದ ಈ ಕುರಿತು ಸ್ಪಷ್ಟನೆ ನೀಡುವುದು ನನ್ನ ಕರ್ತವ್ಯವಾಗಿದೆ,” ಎಂದು ಪ್ರಕಾಶ್ ರಾಜ್ ತಿಳಿಸಿದ್ದಾರೆ.ಪ್ರಸ್ತುತ ತಾವು ದೂರದ ಊರಿನಲ್ಲಿ ಇರುವುದಾಗಿ ತಿಳಿಸಿರುವ ಅವರು, “ಇನ್ನೆರಡು ದಿನಗಳಲ್ಲಿ ನಾನೇ ಸ್ವತಃ ಮಾಧ್ಯಮಗಳ ಮುಂದೆ ಬಂದು ಈ ಕುರಿತು ಸಂಪೂರ್ಣವಾಗಿ ಪ್ರತಿಕ್ರಿಯೆ ನೀಡುತ್ತೇನೆ.
ಅಲ್ಲಿಯವರೆಗೆ ಗಾಳಿಮಾತುಗಳನ್ನು ಮತ್ತು ಕೆಲವು ದುರುದ್ದೇಶಪೂರಿತ ವ್ಯಕ್ತಿಗಳು ಈ ಸುದ್ದಿಗೆ ಸೇರಿಸುತ್ತಿರುವ ಸುಳ್ಳು ಆರೋಪಗಳನ್ನು ನಂಬಬೇಡಿ,” ಎಂದು ಮನವಿ ಮಾಡಿದ್ದಾರೆ. ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವು ಪ್ರಕರಣದ ತನಿಖೆಯನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ, ಪ್ರಕರಣದ ಆರಂಭಿಕ ಸಾಕ್ಷಿ ದೂರುದಾರನಾಗಿದ್ದ ಸಿ.ಎನ್. ಚಿನ್ನ ಅಲಿಯಾಸ್ ಚಿನ್ನಯ್ಯ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿಯಲ್ಲಿ ನಟ ಪ್ರಕಾಶ್ ರಾಜ್ ಅವರ ಹೆಸರೂ ಉಲ್ಲೇಖವಾಗಿರುವ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.








