ವೇದಿಕೆಯಲ್ಲಿ ತುಳು ಮಾತನಾಡಿ ಗಮನ ಸೆಳೆದ ಮಂಗಳೂರಿನ ಯುವತಿ
ಸೋನಿ ಟಿವಿಯಲ್ಲಿ ಪ್ರಸಾರವಾಗುವ “ಕೌನ್ ಬನೇಗಾ ಕರೋಡ್‌ಪತಿ’ (ಕೆಬಿಸಿ) ಕಾರ್ಯಕ್ರಮದಲ್ಲಿ ಮಂಗಳೂರಿನ ಪಂಪ್‌ವೆಲ್‌ನ ಲೋಕನಾಥ ಶೆಟ್ಟಿ ಮತ್ತು ಮಧುರಾ ಎಲ್ ಶೆಟ್ಟಿ ದಂಪತಿಗಳ ಪುತ್ರಿ ಅಪೂರ್ವಾ ಶೆಟ್ಟಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, 6.40 ಲ.ರೂ. ಬಹುಮಾನ ಗೆದ್ದುಕೊಂಡಿದ್ದಾರೆ. ಅಲ್ಲದೆ ಅವರು ಕಾರ್ಯಕ್ರಮದ ವೇದಿಕೆಯಲ್ಲಿ ತಂದೆ ಮತ್ತು ಮಾವನ ಜೊತೆ ತುಳುವಿನಲ್ಲೇ ಮಾತನಾಡಿರುವುದಕ್ಕೆ ತುಳುವರಿಂದ ಶ್ಲಾಘನೆ ವ್ಯಕ್ತವಾಗಿದೆ.
ಕೌನ್ ಬನೇಗಾ ಕರೋಡ್‌ಪತಿ ಸೆ. 27ರಂದು ರಾತ್ರಿ ಅಪೂರ್ವಾ ಅವರ ಸಂಚಿಕೆ ಪ್ರಸಾರಗೊಂಡಿದ್ದು, 10 ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ್ದರು. 11ನೇ ಪ್ರಶ್ನೆಯಾಗಿ “ಮ್ಯಾನ್ ಗ್ರೋವ್ ಫಾರೆಸ್ಟ್(ಕಾಂಡ್ಲಾವನ) ಹೆಚ್ಚಿರುವ ದೇಶ ಯಾವುದು?’ ಪ್ರಶ್ನೆಯನ್ನು ಕೇಳಲಾಗಿತ್ತು. ಬ್ರೆಜಿಲ್, ನೈಜಿರೀಯಾ, ಬಾಂಗ್ಲಾದೇಶ ಹಾಗೂ ಇಂಡೋನೇಶ್ಯಾದ ಆಯ್ಕೆ ನೀಡಲಾಗಿತ್ತು. ಉತ್ತರಿಸಲು ಗೊಂದಲಕ್ಕೀಡಾದ ಅಪೂರ್ವಾ ಉತ್ತರಕ್ಕಾಗಿ ಮಾವನಿಗೆ ಕರೆ ಮಾಡಿದರು. ಅವರೊಂದಿಗೆ ತುಳುವಿನಲ್ಲೇ ಪ್ರಶ್ನೆ ಕೇಳಿದ ಅಪೂರ್ವ ಅವರು ನೈಜೀರಿಯಾ ಆಗಿರಬೇಕೆಂದು ಸಂಶಯದ ಉತ್ತರ ನೀಡಿದರು. ಆ ಉತ್ತರದ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ, ತಪ್ಪಾಗಿ ಉತ್ತರಿಸಿದರೆ ಹಣ ಕಡಿತವಾಗುವುದರಿಂದ 10 ಪ್ರಶ್ನೆಗಳ ಉತ್ತರಕ್ಕೆ ದೊರಕಿದ್ದ 6.40 ಲಕ್ಷ ರೂ.ಗಳಿಗೆ ಖುಷಿ ಪಟ್ಟು ಸ್ಪರ್ಧೆಯಿಂದ ಹಿಂದೆ ಸರಿದರು.
ಈ ವೇಳೆ ಅಪೂರ್ವಾ ಅವರು ಅಮಿತಾಬ್ ಬಚ್ಚನ್ ಅವರಲ್ಲಿ “ನನ್ನ ತಂದೆ ನಿಮ್ಮ ದೊಡ್ಡ ಅಭಿಮಾನಿ’ ಎಂದು ಹೇಳಿದರು. ಅಮಿತಾಬ್ ಬಚ್ಚನ್ ಆಕೆಯ ತಂದೆ ಲೋಕನಾಥ್ ಶೆಟ್ಟಿಗೆ ವೀಡಿಯೋ ಕರೆ ಮಾಡಿ ಮಾತನಾಡಿದ್ದಾರೆ. ಆಗ ಲೋಕನಾಥ ಶೆಟ್ಟಿ ಪುತ್ರಿ ಜೊತೆ ತುಳುವಿನಲ್ಲಿ ಮಾತನಾಡಿ ತುಳುವಿನ ಮಹತ್ವವನ್ನು ಮೆರೆಸಿದ್ದಾರೆ. ಲೋಕನಾಥ ಶೆಟ್ಟಿ ಅವರು ಅಮಿತಾಭ್ ಜತೆಗೆ ಮಾತನಾಡುತ್ತಾ ಆನಂದಭಾಷ್ಪ ಸುರಿಸಿದ್ದಾರೆ. ಆಗ ಅಪೂರ್ವಾ ಕಣ್ಣಲ್ಲೂ ನೀರು ಬರುವುದನ್ನು ನೋಡಿ ಅಮಿತಾಭ್ ಎದ್ದು ಪೇಪರ್ ಕರ್ಚೀಫ್ ನೀಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮಂಗಳೂರಿನ ಯುವತಿ ಪಾಲ್ಗೊಂಡಿದ್ದಲ್ಲದೆ, ಅದರಲ್ಲಿ ಸ್ಥಳೀಯ ತುಳು ಭಾಷೆಯಲ್ಲೇ ಮಾತನಾಡಿ ಮಾತೃಭಾಷೆಯ ಮೇಲಿನ ಪ್ರೀತಿಯನ್ನು ತೋರಿಸಿದ್ದು ವಿಶೇಷವಾಗಿದೆ.