Saturday, July 18, 2026
spot_imgspot_img
spot_imgspot_img

ದಾರಿ ತಪ್ಪಿಸುತ್ತಿರುವ ದಾರಿ ಸೂಚಕ ಫಲಕಗಳು; ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಡವಟ್ಟು..?ಗೂಗಲ್ ನೋಡಿ ಫಲಕ ಅಳವಡಿಸಿದ್ದಾರಾ..?-ಸಾರ್ವಜನಿಕರ ಪ್ರಶ್ನೆ

- Advertisement -
- Advertisement -

ಮಾಣಿ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಅಂತಿಮ ಹಂತ ತಲುಪುತ್ತಿದ್ದಂತೆ ವಿವಿಧ ಪ್ರದೇಶಗಳಲ್ಲಿ ಊರಿನ ಹೆಸರು ಹಾಗೂ ಸಂಪರ್ಕ ರಸ್ತೆಗಳ ಕುರಿತು ದಾರಿ ಸೂಚಕ ಫಲಕಗಳನ್ನು ಅಳವಡಿಸಲಾಗುತ್ತಿದೆ. ಆದರೆ, ಕೆಲವು ಕಡೆ ಅಳವಡಿಸಲಾಗಿರುವ ಫಲಕಗಳಲ್ಲಿ ಸ್ಥಳದ ಹೆಸರು ಮತ್ತು ದಿಕ್ಕುಗಳ ಕುರಿತು ತಪ್ಪು ಮಾಹಿತಿ ನೀಡಲಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ.

ಸೂರಿಕುಮೇರು ಸಮೀಪದ ಹೈವೇ ಚಿಕನ್ ಸ್ಟಾಲ್ ಬಳಿ ಅಳವಡಿಸಲಾದ ಫಲಕದಲ್ಲಿ ‘ಬಾಳ್ತಿಲ’ ಕಡೆಗೆ ಹೋಗುವ ದಾರಿ ಎಂದು ಸೂಚಿಸಲಾಗಿದೆ. ಆದರೆ, ಸೂಚಿಸಿರುವ ರಸ್ತೆಯಲ್ಲಿ ಬಾಳ್ತಿಲ ಗ್ರಾಮಕ್ಕೆ ಹೋಗುವ ಮಾರ್ಗವಿಲ್ಲದೆ, ಸ್ಥಳೀಯ ಯೂಸುಫ್ ಹಾಜಿಯವರ ಮನೆಗೆ ಹೋಗುವ ರಸ್ತೆ ಮಾತ್ರ ಇದೆ ಎಂದು ಸ್ಥಳೀಯರು ಹೇಳುತ್ತಾರೆ.ಬಾಳ್ತಿಲ ಪಂಚಾಯತ್‌ಗೆ ಹೋಗುವ ರಸ್ತೆಯನ್ನು ಸೂಚಿಸಬೇಕಿದ್ದರೆ, ನೀರಪಾದೆ ಕಡೆಗೆ ಹೋಗುವ ರಸ್ತೆಯ ಬಳಿ ಫಲಕ ಅಳವಡಿಸಬೇಕಿತ್ತು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.ಇದಲ್ಲದೆ, ಎಲ್ಲ ಭಾಷೆಗಳಲ್ಲೂ ಸಾಮಾನ್ಯವಾಗಿ ‘ಬಿಸಿ ರೋಡ್’ ಎಂದು ಕರೆಯಲ್ಪಡುವ ಸ್ಥಳದ ಹೆಸರನ್ನು ಫಲಕದಲ್ಲಿ ‘ಬಿಸಿ ರಸ್ತೆ’ ಎಂದು ನಮೂದಿಸಿರುವುದು ಕೂಡ ಟೀಕೆಗೆ ಗುರಿಯಾಗಿದೆ.

ಇದೇ ರೀತಿಯ ಇನ್ನೂ ಹಲವು ತಪ್ಪುಗಳಿರುವ ಫಲಕಗಳು ವಿವಿಧೆಡೆ ಅಳವಡಿಸಲಾಗಿವೆ ಎನ್ನಲಾಗಿದೆ.ಸ್ಥಳೀಯ ಪಂಚಾಯತ್ ಸದಸ್ಯರು, ಅಧಿಕಾರಿಗಳು ಅಥವಾ ಸಾಮಾಜಿಕ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ, ಸರಿಯಾದ ಸ್ಥಳದಲ್ಲಿ ಹಾಗೂ ಸರಿಯಾದ ಮಾಹಿತಿಯೊಂದಿಗೆ ಫಲಕಗಳನ್ನು ಅಳವಡಿಸಿದ್ದರೆ ಇಂತಹ ಗೊಂದಲ ಮತ್ತು ನಗೆಪಾಟಲು ತಪ್ಪಿಸಬಹುದಿತ್ತು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದ್ದರಿಂದ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಪ್ಪುಗಳನ್ನು ಪರಿಶೀಲಿಸಿ, ಸ್ಥಳೀಯರ ಸಲಹೆ ಪಡೆದು ದಾರಿ ಸೂಚಕ ಫಲಕಗಳನ್ನು ಸರಿಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

- Advertisement -

Related news

error: Content is protected !!