

ಪುತ್ತೂರು: ರಸ್ತೆಯಲ್ಲಿರುವ ಗುಂಡಿಗಳ ಬಗ್ಗೆ ತೀರಾ ಅಸಮಾಧಾನ ವ್ಯಕ್ತಪಡಿಸಿದ್ದ ಶಾಸಕರು ಪುತ್ತೂರು ನಗರಸಭೆ ಕಮಿಷನರ್ ಗೆ ಖಡಕ್ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ನಗರದ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವ ಕಾರ್ಯ ಆರಂಭವಾಗಿದೆ.

ಪುತ್ತೂರು ನಗರದ ಸುತ್ತಮುತ್ತ ಭಾರೀ ಮಳೆಯಿಂದಾಗಿ ರಸ್ತೆಗಳು ಹಾಳಾಗಿದ್ದು, ಹೊಂಡ ಗುಂಡಿಗಳು ನಿರ್ಮಾಣವಾಗಿದ್ದವು. ಇತ್ತೀಚೆಗೆ ಶಾಸಕ ಅಶೋಕ್ ಕುಮಾರ್ ರೈ ನಗರಸಭೆ ಕಮಿಷನರ್ ಗೆ ಗುಂಡಿ ಮುಚ್ಚುವಂತೆ ಸೂಚಿಸಿದ್ದರು, ಶಾಸಕರ ಸೂಚನೆ ಬಳಿಕವೂ ಕಾಮಗಾರಿ ಆರಂಭವಾಗಿರಲಿಲ್ಲ, ಈ ಹಿನ್ನಲೆ ಕಾರಿನಲ್ಲಿ ಹೋಗುವಾಗ ರಸ್ತೆ ಗುಂಡಿಗಳನ್ನು ಕಂಡು ಗರಂ ಆದ ಶಾಸಕರು, ರಸ್ತೆ ಗುಂಡಿಗಳನ್ನು ಮುಚ್ಚಿ ಎಂದು ಎಷ್ಟು ಸಲ ಹೇಳಬೇಕು. ನಾನು ಹೇಳೋ ಭಾಷೆ ನಿಮಗೆ ಅರ್ಥವಾಗುತ್ತೋ ಇಲ್ಲವೋ? ಎಲ್ಲದಕ್ಕೂ ಇಂಜಿನಿಯರ್ ಅಂದ್ರೆ ಕಮಿಷನರ್ ಆಗಿ ನೀವು ಏಕೆ? ಎಲ್ಲದ್ದಕ್ಕೂ ಕೆಳ ಹಂತದ ಅಧಿಕಾರಗಳತ್ತ ಕೈ ತೋರಿಸುತ್ತೀರಾ? ಈ ರಸ್ತೆಯಲ್ಲಿ ಹೋಗುವ ಜನ ಇಲ್ಲಿ ಸಾಯುತ್ತಿದ್ದಾರೆ. ಹೀಗಿರುವಾಗ ಮುಂದಿನ ಮಳೆಗಾಲದವರೆಗೂ ಕಾಲ ಕಳೆಯುತ್ತೀರಾ? ನಾಳೆ ಕೆಲಸ ಆಗದಿದ್ರೆ ಮತ್ತೆ ಏನು ಮಾಡುತ್ತೇನೆ ಅಂತಾ ನೋಡಿ ಎಂದು ಎಚ್ಚರಿಕೆ ನೀಡಿದ್ದಾರೆ.











