



ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಅಕ್ರಮವಾಗಿ ನೆಲೆಸಿದ್ದ 8 ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಸುರತ್ಕಲ್ ಪೊಲೀಸರು ಪತ್ತೆಹಚ್ಚಿದ್ದಾರೆ.ಖಚಿತ ಮಾಹಿತಿಯ ಮೇರೆಗೆ ಜುಲೈ 9ರಂದು ಸುರತ್ಕಲ್ ಪೊಲೀಸರು ದಾಳಿ ನಡೆಸಿ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಒಟ್ಟು 54 ಮಂದಿ ಕಾರ್ಮಿಕರ ದಾಖಲಾತಿಗಳನ್ನು ಪರಿಶೀಲಿಸಿದರು. ಈ ವೇಳೆ ಅಗತ್ಯ ದಾಖಲೆಗಳಿಲ್ಲದೆ ಅಕ್ರಮವಾಗಿ ವಾಸಿಸುತ್ತಿದ್ದ 8 ಮಂದಿ ಬಾಂಗ್ಲಾದೇಶದ ಪ್ರಜೆಗಳು ಪತ್ತೆಯಾಗಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ, ಆರೋಪಿಗಳು ಸುಮಾರು ಮೂರು ತಿಂಗಳ ಹಿಂದೆ ಅಕ್ರಮವಾಗಿ ಭಾರತಕ್ಕೆ ನುಸುಳಿ, ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ವಿಳಾಸವಿರುವ ಆಧಾರ್ ಕಾರ್ಡ್‌ಗಳ ಬಣ್ಣದ ಜೆರಾಕ್ಸ್ ಪ್ರತಿಗಳಲ್ಲಿ ತಮ್ಮ ಭಾವಚಿತ್ರ ಅಂಟಿಸಿ ಬಳಸಿಕೊಂಡು ಕಳೆದ ಎರಡು ತಿಂಗಳಿನಿಂದ ನಿರ್ಮಾಣ ಕಾಮಗಾರಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ.ಪೊಲೀಸರು ಅವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ ವೇಳೆ ಅವರ ಬಳಿ ಇದ್ದ ಬಾಂಗ್ಲಾದೇಶದ ರಾಷ್ಟ್ರೀಯ ಗುರುತಿನ ಚೀಟಿ (National ID Card), ಜನನ ಪ್ರಮಾಣಪತ್ರ ಹಾಗೂ ಕುಟುಂಬದ ದಾಖಲೆಗಳನ್ನು ಪರಿಶೀಲಿಸಿದಾಗ ಅವರು ಬಾಂಗ್ಲಾದೇಶದ ನಿವಾಸಿಗಳಾಗಿರುವುದು ದೃಢಪಟ್ಟಿದೆ. ಭಾರತ ಪ್ರವೇಶಿಸಲು ಅಗತ್ಯವಿರುವ ಪಾಸ್‌ಪೋರ್ಟ್ ಹಾಗೂ ವೀಸಾ ಇಲ್ಲದೆ ಅಕ್ರಮವಾಗಿ ಗಡಿ ದಾಟಿ ಬಂದಿರುವುದು ತನಿಖೆಯಲ್ಲಿ ತಿಳಿದುಬಂದಿದೆ.ಘಟನೆಗೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮಕ್ಕಾಗಿ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO), ಬೆಂಗಳೂರಿಗೆ ವರದಿ ಸಲ್ಲಿಸಲಾಗಿದೆ.
ಈ ಕಾರ್ಯಾಚರಣೆಯನ್ನು ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ್ ಅವರ ನೇತೃತ್ವದಲ್ಲಿ ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಮಾರ್ಗದರ್ಶನದಲ್ಲಿ ಪಿಎಸ್‌ಐ ರಘು ನಾಯಕ್ ಹಾಗೂ ಠಾಣೆಯ ಸಿಬ್ಬಂದಿ ರಾಜೇಶ್ ಆಳ್ಳ, ತಿರುಪತಿ ಅಳ್ಕೊಳ್ಳಿ, ಉಮೇಶ್, ರಾಜೇಂದ್ರ ಪ್ರಸಾದ್, ಕಾರ್ತಿಕ್, ವಿನೋದ್ ಕುಮಾರ್, ಸತೀಶ್ ಸತ್ತಿಗೇರಿ, ಸಂತೋಷ್ ಮತ್ತು ಓಂಪ್ರಕಾಶ್ ಬಿಂಗರ್ ಅವರು ಯಶಸ್ವಿಯಾಗಿ ನಡೆಸಿದರು.








