


ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಂಡಿಂಜೆ ಗ್ರಾಮದ ಕಾಣಲಚ್ಚಿ ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕ ಅಡ್ಡೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ಅ. 18 ರಂದು ಮಧ್ಯಾಹ್ನ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಸುತ್ತಿರುವ ಬಗ್ಗೆ ವೇಣೂರು ಪೊಲೀಸ್ ಠಾಣೆಯ ಪಿಎಸ್ಐ ಅಕ್ಷಯ ಡವಗಿ (ಕಾ ಮತ್ತು ಸು) ಅವರಿಗೆ ಖಚಿತ ಮಾಹಿತಿ ಬಂದಿತ್ತು. ಮಾಹಿತಿ ಆಧರಿಸಿ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಕೋಳಿ ಅಂಕ ನಡೆಯುತ್ತಿರುವುದು ಧೃಢಪಟ್ಟಿದೆ.
ಪೊಲೀಸರನ್ನು ಕಂಡು ಆರೋಪಿಗಳು ಓಡಿಹೋಗಲು ಯತ್ನಿಸಿದ್ದು, ಈ ವೇಳೆ 4 ಜನರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನು ಮೋಹನ ಗೌಡ (45), ದಿನೇಶ್ (45), ಪ್ರಶಾಂತ (35) ಹಾಗೂ ಧೀರಜ್ ಎಂದು ಗುರುತಿಸಲಾಗಿದೆ.
ಸ್ಥಳದಿಂದ 7 ಅಂಕದ ಕೋಳಿಗಳು, 3 ದ್ವಿಚಕ್ರ ವಾಹನಗಳು ಹಾಗೂ 1 ಆಟೋರಿಕ್ಷಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ 72/2026, ಕಲಂ 87, 93 KP Act ಮತ್ತು ಕಲಂ 3, 11(1)(m)(ii), 11(1)(n) ಪ್ರಾಣಿ ಹಿಂಸೆ ತಡೆ ಕಾಯ್ದೆ 1960 ಹಾಗೂ ಕಲಂ 112 BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.








