
ಬೇಗುಸರಾಯಿ (ಬಿಹಾರ): ಮಹಿಳೆಯೊಬ್ಬರ ಮೇಲೆ ಐವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದಲ್ಲದೆ, ಆಕೆಯ ಮರ್ಮಾಂಗಕ್ಕೆ ಜೀವಂತ ಗುಂಡು, ಕಲ್ಲು ಹಾಗೂ ಕಟ್ಟಿಗೆಯ ತುಂಡು ತುರುಕಿರುವ ಆರೋಪ ಕೇಳಿಬಂದಿರುವ ಘಟನೆ ಬಿಹಾರದ ಬೇಗುಸರಾಯಿ ಜಿಲ್ಲೆಯಲ್ಲಿ ನಡೆದಿದೆ.
ಚಕಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೂನ್ 11ರಂದು ಈ ಘಟನೆ ನಡೆದಿದ್ದು, ಸಂತ್ರಸ್ತೆಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಘಟನೆಯ ದಿನ ಬೆಳಿಗ್ಗೆ ಸುಮಾರು 11.30ರ ವೇಳೆಗೆ ಐವರು ಬಲವಂತವಾಗಿ ಮನೆಗೆ ನುಗ್ಗಿದ್ದಾರೆ. ಆ ವೇಳೆ ಶೌಚಾಲಯದಲ್ಲಿದ್ದ ಮಹಿಳೆಯ ಪತಿಯನ್ನು ಆರೋಪಿಗಳು ಕೋಣೆಯೊಂದರಲ್ಲಿ ಕೂಡಿ ಹಾಕಿದ್ದಾರೆ. ಬಳಿಕ ಮಹಿಳೆಯನ್ನು ಮನೆಯ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತಾನು ಪ್ರತಿರೋಧ ವ್ಯಕ್ತಪಡಿಸಿದಾಗ ಆರೋಪಿಗಳು ಎದೆ ಮತ್ತು ತೊಡೆಯ ಭಾಗಗಳಲ್ಲಿ ಬ್ಲಡ್‌ನಿಂದ ಗಾಯಗೊಳಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಘಟನೆಯ ಬಳಿಕ ಆಕೆ ಪ್ರಜ್ಞಾಹೀನರಾಗಿದ್ದ ಕಾರಣ, ತನ್ನ ಮರ್ಮಾಂಗಕ್ಕೆ ವಸ್ತುಗಳನ್ನು ತುರುಕಿರುವ ವಿಚಾರ ತಿಳಿದಿರಲಿಲ್ಲ ಎಂದು ತಿಳಿಸಿದ್ದಾರೆ.
ನಂತರ ಮಹಿಳೆಯ ಕಿರಿಯ ನಾದಿನಿ ಸ್ಥಳಕ್ಕೆ ಬಂದು ಪತಿಯನ್ನು ಕೋಣೆಯಿಂದ ಬಿಡಿಸಿದ್ದು, ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ಸೂಚನೆಯಂತೆ ಮಹಿಳೆಯನ್ನು ಮೊದಲು ಬರೌನಿ ಆಸ್ಪತ್ರೆಗೆ ಹಾಗೂ ಬಳಿಕ ಸದರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಮನೆಗೆ ಮರಳಿದ್ದ ಮಹಿಳೆಗೆ ಮರ್ಮಾಂಗದಲ್ಲಿ ನಿರಂತರ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮತ್ತೆ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಈ ವೇಳೆ ಮರ್ಮಾಂಗದಿಂದ ಜೀವಂತ ಗುಂಡು, ಕಲ್ಲು ಹಾಗೂ ಕಟ್ಟಿಗೆಯ ತುಂಡನ್ನು ವೈದ್ಯರು ಹೊರತೆಗೆದಿದ್ದಾರೆ ಎಂದು ತಿಳಿದುಬಂದಿದೆ.
“ಆಸ್ಪತ್ರೆಯಲ್ಲಿ ಆರಂಭಿಕ ಚಿಕಿತ್ಸೆ ಪಡೆದಿದ್ದರೂ ನೋವು ಕಡಿಮೆಯಾಗಲಿಲ್ಲ. ಮರುಪರಿಶೀಲನೆ ವೇಳೆ ವೈದ್ಯರು ಜೀವಂತ ಗುಂಡು, ಕಲ್ಲು ಹಾಗೂ ಕಟ್ಟಿಗೆಯ ತುಂಡನ್ನು ಹೊರತೆಗೆದರು. ಈಗಲೂ ನೋವು ಮುಂದುವರಿದಿದೆ” ಎಂದು ಸಂತ್ರಸ್ತೆ ತಿಳಿಸಿದ್ದಾರೆ.
ಮೂರು ತಿಂಗಳ ಹಿಂದೆ ಕೂಡ ಮೂವರು ಮನೆಗೆ ನುಗ್ಗಿ ತನ್ನ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ಆಗ ಹಣ ಮತ್ತು ಒಡವೆಗಳನ್ನು ದೋಚಿಕೊಂಡು ಪರಾರಿಯಾಗಿದ್ದ ಆರೋಪಿಗಳ ವಿರುದ್ಧ ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಅವರು ದೂರಿದ್ದಾರೆ.
ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಉಪ ಪೊಲೀಸ್ ವರಿಷ್ಠಾಧಿಕಾರಿ ಕುಮಾರ್ ಪಾಂಡೆ, ವೈಜ್ಞಾನಿಕ ರೀತಿಯಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮಹಿಳೆಯ ಹೇಳಿಕೆಯಲ್ಲಿ ಉಲ್ಲೇಖಿಸಿರುವ ಅಂಶಗಳು ಪ್ರಾಥಮಿಕ ತನಿಖೆಯಲ್ಲಿ ನಿಜವೆನಿಸುವಂತಿವೆ. ಜೂನ್ 12ರಂದು ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಮನೆಗೆ ತೆರಳಿದ್ದ ಮಹಿಳೆಯಲ್ಲಿ ಆಂತರಿಕ ಗಾಯಗಳ ಲಕ್ಷಣಗಳು ಕಂಡುಬಂದಿವೆ. ವೈದ್ಯಕೀಯ ಪರೀಕ್ಷೆ ವೇಳೆ ಮರ್ಮಾಂಗದಿಂದ ಗುಂಡೊಂದನ್ನು ಹೊರತೆಗೆದಿರುವುದು ದೃಢಪಟ್ಟಿದೆ. ಪ್ರಕರಣದ ಎಲ್ಲ ಆಯಾಮಗಳನ್ನು ತನಿಖೆ ಮಾಡಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.
ಪ್ರಕರಣದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು. ತನಿಖೆಯಲ್ಲಿ ಪೊಲೀಸರ ನಿರ್ಲಕ್ಷ್ಯ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.







