
ಪುಣೆ: ಮಹಿಳೆಯೊಬ್ಬರನ್ನು ಹಲವು ವರ್ಷಗಳ ಕಾಲ ಲೈಂಗಿಕವಾಗಿ ಶೋಷಣೆ ಮಾಡಿ, ತನ್ನ ಮೂತ್ರವನ್ನು ಕುಡಿಯುವಂತೆ ಬಲವಂತಪಡಿಸಿದ್ದ ಆರೋಪದ ಮೇಲೆ ಸ್ವಯಂ ಘೋಷಿತ ‘ದೇವಮಾನವ’ ಹಾಗೂ ಆತನ ಏಳು ಸಹಚರರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.ಬಂಧಿತನನ್ನು ರಾಧೇಶ್ಯಾಮ್ ಮಿಶ್ರಾ ಅಕಾ ರಾಧಾಮೋಹನ್ ಮಿಶ್ರಾ ಎಂದು ಗುರುತಿಸಲಾಗಿದೆ.
ಆತ ಪುಣೆಯ ವಾಘೋಲಿಯ ಉಬಲೆ ನಗರ ಪ್ರದೇಶದಲ್ಲಿ ‘ಆಧುನಿಕ ಗುರುಕುಲ’ ಎಂಬ ಆಶ್ರಮವನ್ನು ನಡೆಸುತ್ತಿದ್ದ. ಹಲವು ವರ್ಷಗಳಿಂದ ಜನರನ್ನು ತನ್ನ ಪ್ರಭಾವಕ್ಕೆ ಒಳಪಡಿಸಿ ವಂಚಿಸುತ್ತಿದ್ದ ಹಾಗೂ ಶೋಷಿಸುತ್ತಿದ್ದನೆಂದು ಅಧಿಕಾರಿಗಳು ತಿಳಿಸಿದ್ದಾರೆ.ಪೊಲೀಸರ ಮಾಹಿತಿ ಪ್ರಕಾರ, ಸಂತ್ರಸ್ತ ಮಹಿಳೆ 2010ರ ಸುಮಾರಿಗೆ ಮಿಶ್ರಾ ಸಂಪರ್ಕಕ್ಕೆ ಬಂದಿದ್ದರು. ಬಳಿಕ ಆತ ಮಹಿಳೆಯನ್ನು ಆಕೆಯ ಕುಟುಂಬದಿಂದ ಪ್ರತ್ಯೇಕಗೊಳಿಸಿ, ಪತಿಗೆ ವಿಚ್ಛೇದನ ನೀಡುವಂತೆ ಒತ್ತಾಯಿಸಿದ್ದ. 2010ರಿಂದ 2016ರ ನಡುವೆ ಆತ ಮಹಿಳೆಯನ್ನು ಲೈಂಗಿಕವಾಗಿ ಶೋಷಿಸಿದ್ದು, ದೈಹಿಕವಾಗಿ ಹಲ್ಲೆ ನಡೆಸಿದ್ದು, ವಿದ್ಯುತ್ ಆಘಾತಕ್ಕೆ ಒಳಪಡಿಸಿದ್ದಲ್ಲದೆ, ಆಕೆಯ ಅಶ್ಲೀಲ ವಿಡಿಯೊಗಳನ್ನು ಚಿತ್ರೀಕರಿಸಿದ್ದಾನೆ ಎಂದು ಆರೋಪಿಸಲಾಗಿದೆ.ಚಿತ್ರೀಕರಿಸಿದ ವಿಡಿಯೊಗಳನ್ನು ಬಳಸಿಕೊಂಡು ಮಹಿಳೆಯನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆತ, ತನ್ನ ಪ್ರಭಾವ ಹಾಗೂ ತಾನು ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದ ‘ಅಲೌಕಿಕ ಶಕ್ತಿಗಳ’ ಹೆಸರಿನಲ್ಲಿ ಮಹಿಳೆ ಮತ್ತು ಆಕೆಯ ಕುಟುಂಬವನ್ನು ಬೆದರಿಸುತ್ತಿದ್ದನೆಂದು ತನಿಖೆಯಲ್ಲಿ ತಿಳಿದುಬಂದಿದೆ.
ಮಿಶ್ರಾ ಮತ್ತು ಆತನ ಸಹಚರರು, ಆತ ದೇವರ ಪುನರ್ಜನ್ಮ ಎಂಬ ನಂಬಿಕೆಯನ್ನು ಮಹಿಳೆ ಸೇರಿದಂತೆ ತನ್ನ ಹಲವಾರು ಹಿಂಬಾಲಕರಲ್ಲಿ ಮೂಡಿಸಿದ್ದರು. ಈ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಮಹಿಳೆಯನ್ನು ತನ್ನ ಮೂತ್ರವನ್ನು ಕುಡಿಯುವಂತೆ ಬಲವಂತಪಡಿಸಿದ್ದಲ್ಲದೆ, ಆಶ್ರಮ ಹಾಗೂ ತನ್ನ ವೈಯಕ್ತಿಕ ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಕಳ್ಳತನ ಮಾಡುವಂತೆಯೂ ಒತ್ತಾಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಪ್ರಕರಣದ ತನಿಖೆಯ ಭಾಗವಾಗಿ ಪೊಲೀಸರು ಆಶ್ರಮದ ಮೇಲೆ ದಾಳಿ ನಡೆಸಿದ್ದು, ಅಲ್ಲಿನ ಭೂಗತ ಕೊಠಡಿಯೊಂದರಿಂದ ದೊಡ್ಡ ಪ್ರಮಾಣದ ಆಕ್ಷೇಪಾರ್ಹ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 12 ಲ್ಯಾಪ್‌ಟಾಪ್‌ಗಳು, 11 ಮೊಬೈಲ್ ಫೋನ್‌ಗಳು, 19 ಹಾರ್ಡ್ ಡ್ರೈವ್ ಗಳು, ಹಲವು ಪೆನ್ ಡ್ರೈವ್‌ಗಳು ಹಾಗೂ ಕ್ಯಾಸೆಟ್ ಗಳನ್ನು ಜಪ್ತಿ ಮಾಡಲಾಗಿದೆ. ಇದಲ್ಲದೆ, ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ನಗದು ಮತ್ತು ಆಭರಣಗಳು, ಔಷಧೀಯ ಮಾತ್ರೆಗಳು ಹಾಗೂ ವಿವಿಧ ಔಷಧಿಗಳ ದೊಡ್ಡ ಸಂಗ್ರಹವೂ ಪತ್ತೆಯಾಗಿದೆ.
ವಶಪಡಿಸಿಕೊಳ್ಳಲಾದ ಇಲೆಕ್ಟ್ರಾನಿಕ್ ಸಾಧನಗಳ ವಿಧಿವಿಜ್ಞಾನ ಪರೀಕ್ಷೆ ನಡೆಯುತ್ತಿದ್ದು, ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ.ಮಿಶ್ರಾ ಮತ್ತು ಆತನ ಆಪ್ತ ಸಹಾಯಕ ‘ಸ್ವಾಮಿ’ ಕನ್ವಾಲ್ ನಯನ್ ಸೇರಿದಂತೆ ಒಟ್ಟು ಏಳು ಸಹಚರರನ್ನು ಬಂಧಿಸಲಾಗಿದೆ. “ಈ ಪ್ರಕರಣದಲ್ಲಿ ಇನ್ನೂ ಹೆಚ್ಚಿನ ಸಂತ್ರಸ್ತರು ಮುಂದೆ ಬರುವ ಸಾಧ್ಯತೆ ಇದೆ. ನಾವು ಸವಿಸ್ತಾರ ತನಿಖೆ ನಡೆಸುತ್ತಿದ್ದು, ಹೆಚ್ಚಿನ ಪುರಾವೆಗಳನ್ನು ಸಂಗ್ರಹಿಸುವ ಕಾರ್ಯ ಮುಂದುವರಿದಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒಟ್ಟು ಎಂಟು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ಶನಿವಾರದವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.








