
ಪುತ್ತೂರು: ಓವರ್ಟೇಕ್ ವಿಚಾರವಾಗಿ ಕಾರಿನ ದಾರಿ ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿ ಹಲ್ಲೆ ನಡೆಸಿದ ಆರೋಪದಡಿ ಇಬ್ಬರ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಸರಗೋಡು ಜಿಲ್ಲೆಯ ಕಲ್ನಾಡು ನಿವಾಸಿ ಪ್ರಸನ್ನ ಕುಮಾರ್ ಕೆ.ವಿ. (35) ಅವರು ನೀಡಿದ ದೂರಿನ ಪ್ರಕಾರ, ಜೂನ್ 27ರಂದು ಸಂಜೆ ಕುಟುಂಬದೊಂದಿಗೆ ಆಲ್ಟೋ ಕಾರಿನಲ್ಲಿ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ವೇಳೆ, ರಾತ್ರಿ ಸುಮಾರು 7.50ಕ್ಕೆ ನೆಟ್ಟಣಿಗೆ ಮುಡ್ನೂರು ಗ್ರಾಮದ ಗಾಳಿಮುಖ ಸಮೀಪ ಹಿಂದಿನಿಂದ ಬಂದ ಪಿಕಪ್ ವಾಹನದ ಚಾಲಕ ನಿರಂತರವಾಗಿ ಹಾರ್ನ್ ಹಾಕುತ್ತಾ ಇಕ್ಕಟ್ಟಿನ ರಸ್ತೆಯಲ್ಲಿ ಓವರ್ಟೇಕ್ ಮಾಡಲು ಯತ್ನಿಸಿದ್ದಾನೆ.ಈ ವೇಳೆ ನಿಧಾನವಾಗಿ ಸಾಗುವಂತೆ ಸೂಚಿಸಿದ ಹಿನ್ನೆಲೆಯಲ್ಲಿ, ಪಿಕಪ್ ವಾಹನವನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಿ ಕಾರಿನ ದಾರಿ ತಡೆದ ಚಾಲಕ ಹಾಗೂ ಆತನೊಂದಿಗೆ ಇದ್ದ ಮತ್ತೋರ್ವ ವ್ಯಕ್ತಿ ಕಾರಿನಿಂದ ಇಳಿದು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಪ್ರಸನ್ನ ಕುಮಾರ್ ಹಾಗೂ ಅವರ ಸಹೋದರ ಸುಜೀತ್ ಕಾರಿನಿಂದ ಇಳಿದಾಗ, ಪಿಕಪ್ ಚಾಲಕ ಸುಜೀತ್ ಅವರನ್ನು ಕೈಯಿಂದ ತಳ್ಳಿದ ಎನ್ನಲಾಗಿದೆ. ಬಳಿಕ ಸ್ಥಳೀಯರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.




ಆರೋಪಿಗಳನ್ನು ಹನೀಫ್ ಹಾಗೂ ಮಹಮ್ಮದ್ ನಿಯಾಝ್ ಎಂದು ಗುರುತಿಸಲಾಗಿದ್ದು, ಈ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 97/2026 ದಾಖಲಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ಗಳಾದ 126(2), 352, 351(2), 115(2) ಹಾಗೂ 3(5)ರಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.








