


ಮಂಗಳೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಹಣಕಾಸಿನ ಕೊರತೆಯಿಂದ ತುರ್ತು ಚಿಕಿತ್ಸೆ ವಿಳಂಬವಾಗಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪಿಎಂ ರಾಹತ್ (PM-RAHAT) ಯೋಜನೆಯಡಿ ಗಾಯಾಳುಗಳಿಗೆ ₹1.5 ಲಕ್ಷದವರೆಗೆ ನಗದು ರಹಿತ ಚಿಕಿತ್ಸೆಯ ಸೌಲಭ್ಯ ಲಭ್ಯವಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಮೂಲಕ 2026ರ ಫೆಬ್ರವರಿ 13ರಿಂದ ದೇಶಾದ್ಯಂತ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ರಸ್ತೆ ಅಪಘಾತದಲ್ಲಿ ಗಾಯಗೊಂಡ ಸಂತ್ರಸ್ತರಿಗೆ ಅಪಘಾತ ಸಂಭವಿಸಿದ ದಿನಾಂಕದಿಂದ ಗರಿಷ್ಠ ಏಳು ದಿನಗಳವರೆಗೆ, ಪ್ರತಿ ವ್ಯಕ್ತಿಗೆ ₹1.5 ಲಕ್ಷದವರೆಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಪಡೆಯಲು ಅವಕಾಶವಿದೆ.ಯಾವುದೇ ರಸ್ತೆಯಲ್ಲಿ ಸಂಭವಿಸುವ ಅಪಘಾತಗಳಲ್ಲಿ ಗಾಯಗೊಂಡ ನಾಗರಿಕರು ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಆದರೆ, ಅಪಘಾತ ಸಂಭವಿಸಿದ 24 ಗಂಟೆಗಳ ಒಳಗಾಗಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ, ಯೋಜನೆಯಡಿ ಚಿಕಿತ್ಸೆ ಆರಂಭಿಸಬೇಕು.ಯೋಜನೆಯ ಅನುಷ್ಠಾನ ಮತ್ತು ಚಿಕಿತ್ಸಾ ಪ್ರಕ್ರಿಯೆಯ ನೈಜ ಸಮಯದ ಮೇಲ್ವಿಚಾರಣೆಗಾಗಿ eDAR ಹಾಗೂ TMS 2.0 ಡಿಜಿಟಲ್ ವ್ಯವಸ್ಥೆಗಳನ್ನು ಜೋಡಿಸಲಾಗಿದ್ದು, ಪೊಲೀಸ್ ದೃಢೀಕರಣಕ್ಕೂ ವ್ಯವಸ್ಥೆ ಕಲ್ಪಿಸಲಾಗಿದೆ. ಮೋಟಾರು ವಾಹನ ಅಪಘಾತ ನಿಧಿಯಿಂದ ಯೋಜನೆಗೆ ಹಣಕಾಸು ಒದಗಿಸಲಾಗುತ್ತದೆ.
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 2026ರ ಜುಲೈ 21ರಿಂದ ನಗರದ ಆಸ್ಪತ್ರೆಗಳಲ್ಲಿ ಯೋಜನೆಗೆ ಅಗತ್ಯವಿರುವ ತಾಂತ್ರಿಕ ವ್ಯವಸ್ಥೆಗಳನ್ನು ಅಳವಡಿಸಲಾಗಿದ್ದು, ಅಪಘಾತದ ಗಾಯಾಳುಗಳ ಚಿಕಿತ್ಸೆಯ ಮಾಹಿತಿಯನ್ನು ದಾಖಲಿಸಲಾಗುತ್ತಿದೆ. ಈವರೆಗೆ ಮಂಗಳೂರು ನಗರ ವ್ಯಾಪ್ತಿಯಲ್ಲಿ ಒಟ್ಟು 109 ಮಂದಿ ಯೋಜನೆಯಡಿ ನಗದು ರಹಿತ ಚಿಕಿತ್ಸೆಯ ಸೌಲಭ್ಯ ಪಡೆದಿದ್ದಾರೆ.








