
ವಿಟ್ಲ: ಕರ್ನಾಟಕ ಅರಣ್ಯ ಇಲಾಖೆಯ ಪುತ್ತೂರು ವಲಯ ಹಾಗೂ ವಿಟ್ಲ ಉಪವಲಯದ ಸಹಯೋಗದಲ್ಲಿ ವಿಟ್ಲದ ಇತಿಹಾಸ ಪ್ರಸಿದ್ಧ ಕಳೆಂಜಿಮಲೆ ಗುಡ್ಡದಲ್ಲಿ ಹಕ್ಕಿಗಳ ಗುರುತಿಸುವಿಕೆ ಮತ್ತು ಪಕ್ಷಿ ವೀಕ್ಷಣೆ ಕಾರ್ಯಕ್ರಮ ನಡೆಯಿತು.
ಅಕ್ಟೋಬರ್ 31 ಹಾಗೂ ನವೆಂಬರ್ 1ರಂದು ನಡೆದ ಈ ಕಾರ್ಯಕ್ರಮದಲ್ಲಿ ವಿಟ್ಲದ ವಿಟ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, ಕಾಡಿನಲ್ಲಿ ಕಂಡುಬರುವ ವಿವಿಧ ಪ್ರಭೇದದ ಹಕ್ಕಿಗಳನ್ನು ಗುರುತಿಸುವ ಮೂಲಕ ಪಕ್ಷಿ ವೀಕ್ಷಣೆಯ ಅನುಭವ ಪಡೆದರು. ಅರಣ್ಯ ಪರಿಸರ, ಪಕ್ಷಿಗಳ ವೈವಿಧ್ಯತೆ ಹಾಗೂ ಪ್ರಕೃತಿ ಸಂರಕ್ಷಣೆಯ ಮಹತ್ವದ ಕುರಿತು ಅರಿವು ಮೂಡಿಸುವಲ್ಲಿ ಈ ಕಾರ್ಯಕ್ರಮ ಸಹಕಾರಿಯಾಯಿತು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಐತಿಹಾಸಿಕ ಮಹತ್ವ ಹೊಂದಿರುವ ಬಕಾಸುರನ ಗುಹೆಯನ್ನೂ ವೀಕ್ಷಿಸಿದರು. ಗುಹೆಯ ಐತಿಹ್ಯ ಹಾಗೂ ಕಳೆಂಜಿಮಲೆ ಪ್ರದೇಶದ ವಿಶೇಷತೆಗಳ ಬಗ್ಗೆ ತಿಳಿದುಕೊಂಡರು.ವಿಟ್ಲ ಉಪವಲಯ ಅರಣ್ಯಾಧಿಕಾರಿ ವೀರಣ್ಣ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ, ಪಕ್ಷಿಪ್ರೇಮಿ ಮತ್ತು ಉದ್ಯಮಿ ಪಿ. ರಾಧಾಕೃಷ್ಣ ಪೈ, ರಂಗರಾಜ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.










