
ಪುತ್ತೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿದ್ದಿವಿನಾಯಕ ಯುವಕ ಮಂಡಲ (ರಿ.), ಧರ್ಮನಗರ ಕಂಬಳಬೆಟ್ಟು ವತಿಯಿಂದ ಆಗಸ್ಟ್ 9ರಂದು ಕಾರ್ಯಾಡಿ ಬೈಲಿನಲ್ಲಿ ‘ಕೆಸರ್‌ಡೊಂಜಿ ದಿನ’ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ.
ತುಳುನಾಡಿನ ಜಾನಪದ ಕ್ರೀಡೆಗಳು, ಸಂಪ್ರದಾಯಗಳು ಹಾಗೂ ಹಿಂದೂ ಬಾಂಧವರ ಸಾಂಸ್ಕೃತಿಕ ಆಚರಣೆಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಹಾಗೂ ಯುವಜನರಲ್ಲಿ ದೇಶಭಕ್ತಿ, ಭಾಷೆ, ಸಂಸ್ಕೃತಿ ಮತ್ತು ಸಾಮಾಜಿಕ ಸಾಮರಸ್ಯದ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಬೆಳಿಗ್ಗೆ 8 ಗಂಟೆಗೆ ಧರ್ಮನಗರ ಶ್ರೀ ಜಯದುರ್ಗಾಪರಮೇಶ್ವರಿ ದೇವಿ ಸನ್ನಿಧಿಯಿಂದ ಕಾರ್ಯಾಡಿ ಬೈಲಿನವರೆಗೆ ಬೈಕ್ ರ‍್ಯಾಲಿ ನಡೆಯಲಿದೆ. ಬಳಿಕ ಭಜನಾ ಕಾರ್ಯಕ್ರಮ, ಉದ್ಘಾಟನಾ ಸಮಾರಂಭ, ನಿಧಿಶೋಧ, ವಿವಿಧ ಆಟೋಟ ಸ್ಪರ್ಧೆಗಳು, ಗುಂಪು ಆಟಗಳು, ಭೋಜನ, ತುಳು ಪಾರ್ದನ ಸ್ಪರ್ಧೆ ಹಾಗೂ ಸಂಜೆ ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭ ಜರುಗಲಿದೆ.ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ವಹಿಸಲಿದ್ದು, ನಿವೃತ್ತ ಹಿರಿಯ ಲೆಕ್ಕಪರಿಶೋಧಕರಾದ ಎನ್. ಕೃಷ್ಣಪ್ರಸಾದ್ ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಡಾ. ರಾಜಾರಾಮ ಭಟ್, ರೋಶನ್ ರೈ ಬನ್ನೂರು, ಡಾ. ಕೀರ್ತನ್, ಅಜಿತ್ ಕುಮಾರ್ (ಪಿಡಿಒ) ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಸಂಜೆ ನಡೆಯುವ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ಸಿದ್ದಿವಿನಾಯಕ ಯುವಕ ಮಂಡಲದ ಅಧ್ಯಕ್ಷ ಜನಾರ್ಧನ ಪೂಜಾರಿ ಕಾರಾಡಿ ವಹಿಸಲಿದ್ದು, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ.ಕಾರ್ಯಕ್ರಮದಲ್ಲಿ 1ರಿಂದ 5ನೇ ತರಗತಿ, 6ರಿಂದ 10ನೇ ತರಗತಿ, ಯುವತಿಯರು, ಮಹಿಳೆಯರು ಹಾಗೂ ಸಾರ್ವಜನಿಕರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ಆಯೋಜಿಸಲಾಗಿದೆ.
ಇದರೊಂದಿಗೆ ತುಳು ಗಾದೆ-ಒಗಟು ಸ್ಪರ್ಧೆ, ಸಾರ್ವಜನಿಕರ ಪಿರಮಿಡ್ ರಚನೆ, ವಾಲಿಬಾಲ್ ಪಂದ್ಯಾಟ ಹಾಗೂ ಪುರುಷರ ಹಗ್ಗಜಗ್ಗಾಟ ಸೇರಿದಂತೆ ಹಲವು ವಿಶೇಷ ಸ್ಪರ್ಧೆಗಳು ನಡೆಯಲಿದ್ದು, ವಿಜೇತರಿಗೆ ನಗದು ಬಹುಮಾನ ಹಾಗೂ ಟ್ರೋಫಿಗಳನ್ನು ನೀಡಲಾಗುವುದು.
ಈ ಸಾಂಸ್ಕೃತಿಕ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಿದ್ದಿವಿನಾಯಕ ಯುವಕ ಮಂಡಲದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಮನವಿ ಮಾಡಿದ್ದಾರೆ.








