

ಹುಬ್ಬಳ್ಳಿ: ಕರ್ನಾಟಕ ಪ್ರವಾಸದಲ್ಲಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆರೋಗ್ಯದಲ್ಲಿ ಶನಿವಾರ ದಿಢೀರ್ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಹುಬ್ಬಳ್ಳಿಯಲ್ಲಿ ನಿಗದಿಯಾಗಿದ್ದ ಕೆಎಲ್ಇ ಸಂಸ್ಥೆಯ ಕಾರ್ಯಕ್ರಮಕ್ಕೆ ಅವರು ಗೈರಾಗಿದ್ದಾರೆ.



ಶುಕ್ರವಾರ ರಾತ್ರಿ ಹುಬ್ಬಳ್ಳಿಗೆ ಆಗಮಿಸಿದ್ದ ಅಮಿತ್ ಶಾ ಅವರು ನಗರದ ಡೆನಿಸನ್ಸ್ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದರು. ಶನಿವಾರ ಬೆಳಗ್ಗೆ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ವೈದ್ಯರು ತಪಾಸಣೆ ನಡೆಸಿ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ವೈದ್ಯರ ತಂಡ ಹೋಟೆಲ್ನಲ್ಲೇ ಅವರಿಗೆ ಚಿಕಿತ್ಸೆ ಹಾಗೂ ವೈದ್ಯಕೀಯ ಮೇಲ್ವಿಚಾರಣೆ ನೀಡಿದೆ.
ಗಬ್ಬೂರು ಕ್ರಾಸ್ ಬಳಿ ನಿರ್ಮಿಸಲಾಗಿರುವ ಕೆಎಲ್ಇ ಜಗದ್ಗುರು ಗಂಗಾಧರ ಮಹಾಸ್ವಾಮಿಗಳ ಮೂರುಸಾವಿರಮಠ ವೈದ್ಯಕೀಯ ಮಹಾವಿದ್ಯಾಲಯದ ನೂತನ ಕಟ್ಟಡ, 1,200 ಹಾಸಿಗೆಗಳ ಕೆಎಲ್ಇ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರವನ್ನು ಅಮಿತ್ ಶಾ ಉದ್ಘಾಟಿಸಬೇಕಿತ್ತು. ಆದರೆ ಅವರ ಗೈರುಹಾಜರಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ಗಣ್ಯರು ಕಾರ್ಯಕ್ರಮ ನೆರವೇರಿಸಿದರು.

ಅಮಿತ್ ಶಾ ಅವರ ಆರೋಗ್ಯ ಸಮಸ್ಯೆಗೆ ಆಹಾರ ವಿಷಬಾಧೆ ಕಾರಣವಾಗಿರಬಹುದು ಎಂದು ಪ್ರಲ್ಹಾದ್ ಜೋಶಿ ಬಳಿಕ ತಿಳಿಸಿದ್ದಾರೆ. ಸಂಜೆ ವೇಳೆಗೆ ಅವರ ಆರೋಗ್ಯ ಸುಧಾರಿಸಿದ್ದು, ಬಳಿಕ ಅವರು ದೆಹಲಿಗೆ ತೆರಳಿದ್ದಾರೆ ಎಂದು ವರದಿಯಾಗಿದೆ








