

ಏಳು ರಾಜ್ಯಗಳಲ್ಲಿ 14 ಮಹಿಳೆಯರನ್ನು ಮದುವೆಯಾದ ವ್ಯಕ್ತಿಯೋರ್ವ ಕೊನೆಗೂ ಒಡಿಶಾ ಪೊಲೀಸರ ಬಲೆಗೆ ಬಿದ್ದ ಘಟನೆ ನಡೆದಿದೆ. ಒಡಿಶಾದ ಕೇಂದ್ರಪಾರ ಜಿಲ್ಲೆಯ ಪಟ್ಕುರಾ ಗ್ರಾಮದ ನಿವಾಸಿ ರಮೇಶ್ ಎನ್ನಲಾಗಿದೆ. ಈತ ಮದುವೆಯಾದ ಬಳಿಕ ಹಣ ಪಡೆದು ಪರಾರಿಯಾಗುತ್ತಿದ್ದ ಎಂಬ ಆರೋಪವಿದೆ.
ಈತ ಕಳೆದ 48 ವರ್ಷಗಳಿಂದ ಮದುವೆಯಾಗುವ ಕಾಯಕವನ್ನೇ ಮಾಡಿಕೊಂಡು ಬಂದಿದ್ದಾನೆ. 7 ರಾಜ್ಯಗಳ 14 ಮಹಿಳೆಯರನ್ನು ಈತ ಇದಾಗಲೇ ಮದುವೆಯಾಗಿದ್ದು, ಕೊನೆಗೂ ಬಂಧನಕ್ಕೆ ಒಳಗಾಗಿದ್ದಾನೆ. ವಿಚಿತ್ರ ಎಂದರೆ ಈತನ ಬಲೆಗೆ ಬಿದ್ದವರ ಪೈಕಿ ಹಲವರು ವೈದ್ಯರು, ವಕೀಲರು, ಶಿಕ್ಷಕಿಯರು ಹಾಗೂ ದೊಡ್ಡ ದೊಡ್ಡ ಅಧಿಕಾರಿಗಳು. ಅಲ್ಲದೇ ಪ್ಯಾರಾ ಮಿಲಿಟರಿ ಪಡೆಗಳಲ್ಲಿ ಕೆಲಸ ಮಾಡುವ ಮಹಿಳೆಯನ್ನೂ ಕೂಡ ಈತ ಮದುವೆಯಾಗಿದ್ದಾನೆ

ಅಷ್ಟಕ್ಕೂ ಈತ ಮ್ಯಾಟ್ರಿಮೋನಿ ಸೈಟ್‌ನಲ್ಲಿ ನೋಂದಾಯಿಸಿಕೊಂಡಿದ್ದ. ತನ್ನನ್ನು ತಾನು ದೊಡ್ಡ ವೈದ್ಯ ಎಂದು ಹೇಳಿಕೊಂಡು ಪ್ರೊಫೈಲ್ ಸೃಷ್ಟಿಸಿಕೊಂಡಿದ್ದ. ನಂತರ ಅಲ್ಲಿ ಮದುವೆಗಾಗಿ ಜಾಹೀರಾತು ನೀಡುವ ದೊಡ್ಡ ದೊಡ್ಡ ಹುದ್ದೆಯ ಮಹಿಳೆಯರು, ಸಿರಿವಂತರನ್ನು ಟಾರ್ಗೆಟ್ ಮಾಡುತ್ತಿದ್ದ.
ನಂತರ ತಾನು ವೈದ್ಯ, ಇಂತಿಷ್ಟು ಆದಾಯ ಎಂದೆಲ್ಲಾ ರೀಲು ಬಿಟ್ಟು ಅವರನ್ನು ನಂಬಿಸುತ್ತಿದ್ದ. ಹಿಂದೆ ಮುಂದೆ ಯೋಚಿಸದ ಮಹಿಳೆಯರು ಈತನ ಬಲೆಗೆ ಬೀಳುತ್ತಿದ್ದರು. ಅವರನ್ನು ಮದುವೆಯಾಗುತ್ತಿದ್ದ ಆಸಾಮಿ, ಅವರಿಂದ ಚಿನ್ನ, ಹಣ ಕದ್ದು ಎಸ್ಕೇಪ್ ಆಗುತ್ತಿದ್ದ. ಮರ್ಯಾದೆಗೆ ಅಂಜಿ ಮಹಿಳೆಯರು ದೂರು ಕೊಡುತ್ತಿರಲಿಲ್ಲ.

ಹೀಗೆ 1982ರಿಂದ ಇದೇ ಕಾಯಕ ಮಾಡಿಕೊಂಡು ಬಂದ. ಈತ ಮೊದಲು ವಿವಾಹವಾಗಿದ್ದು 1982ರಲ್ಲಿ, ಕೊನೆಯಲ್ಲಿ ಮದುವೆಯಾದದ್ದು 2022ರಲ್ಲಿ. ಈತನಿಗೆ ಐವರು ಮಕ್ಕಳಿದ್ದಾರೆ. ಹೆಚ್ಚಾಗಿ ಈತ ಮಧ್ಯವಯಸ್ಕ ಒಂಟಿ ಮಹಿಳೆಯರನ್ನು ಗುರಿಯಾಗಿಸುತ್ತಿದ್ದ. ಈತನ ಬಲೆಗೆ ಬಿದ್ದವರ ಪೈಕಿ ಹಲವರು ವಿಚ್ಛೇದಿತರು ಎಂದು ಭುವನೇಶ್ವರ ಉಪ ಪೊಲೀಸ್ ಆಯುಕ್ತ ಉಮಾಶಂಕರ್ ದಾಸ್ ಹೇಳಿದ್ದಾರೆ.

ದೆಹಲಿ, ಪಂಜಾಬ್, ಅಸ್ಸಾಂ, ಜಾರ್ಖಂಡ್ ಮತ್ತು ಒಡಿಶಾ ಸೇರಿದಂತೆ ಏಳು ರಾಜ್ಯಗಳಲ್ಲಿ ಮಹಿಳೆಯರನ್ನು ಈ ವ್ಯಕ್ತಿ ವಂಚಿಸಿದ್ದಾನೆ. ಅವರ ಮೊದಲ ಇಬ್ಬರು ಪತ್ನಿಯರು ಒಡಿಶಾದರಾಗಿದ್ದಾರೆ. ಕೊನೆಯ ಪತ್ನಿ ದೆಹಲಿಯಲ್ಲಿದ್ದು ಶಿಕ್ಷಕಿಯಾಗಿದ್ದಾರೆ. ಶಿಕ್ಷಕಿಗೆ ಮದುವೆಯಾದ ಮೇಲೆ ಅನುಮಾನ ಬಂದು ಪೊಲೀಸರಲ್ಲಿ ದೂರು ದಾಖಲಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಇಲ್ಲದಿದ್ದರೆ ಇನ್ನೂ ಅನೇಕ ಮಹಿಳೆಯರು ಈತನ ಜಾಲಕ್ಕೆ ಬೀಳುವ ಸಾಧ್ಯತೆ ಇತ್ತು.
ಆರೋಪಿಯ ಬಳಿಯಿದ್ದ 11 ಎಟಿಎಂ ಕಾರ್ಡ್‌ಗಳು, ನಾಲ್ಕು ಆಧಾರ್ ಕಾರ್ಡ್‌ಗಳು ಮತ್ತು ಇತರ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೈದರಾಬಾದ್ ಮತ್ತು ಎರ್ನಾಕುಲಂನಲ್ಲಿ ನಿರುದ್ಯೋಗಿ ಯುವಕರಿಗೆ ವಂಚನೆ ಮಾಡಿದ ಆರೋಪ ಮತ್ತು ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಈತ ಈ ಹಿಂದೆ ಎರಡು ಬಾರಿ ಬಂಧನಕ್ಕೆ ಒಳಗಾಗಿದ್ದ ಎಂದು ತಿಳಿದುಬಂದಿದೆ.

