Tuesday, July 21, 2026
spot_imgspot_img
spot_imgspot_img

ಇನ್ನು ಮುಂದೆ ದ್ವೇಷ ಭಾಷಣ ಮಾಡಲ್ಲ”: ಹೈಕೋರ್ಟ್ ಗೆ ಮಾತು ಕೊಟ್ಟ ಕಲ್ಲಡ್ಕ ಪ್ರಭಾಕರ ಭಟ್

- Advertisement -
- Advertisement -

ಬೆಂಗಳೂರು: ಇನ್ನು ಮುಂದೆ ದ್ವೇಷ ಭಾಷಣ ಮಾಡುವುದಿಲ್ಲ ಎಂದು ಕಲ್ಲಡ್ಕ ಪ್ರಭಾಕರ ಭಟ್ ಪರವಾಗಿ ಹಿರಿಯ ವಕೀಲ ಅರುಣ್ ಶ್ಯಾಮ್ ಅವರು ಹೈಕೋರ್ಟ್ ಗೆ ಭರವಸೆ (ಅಂಡರ್ ಟೇಕಿಂಗ್) ನೀಡಿದ್ದಾರೆ.

ಉಪ್ಪಳಿಗೆ ದೀಪೋತ್ಸವ ಕಾರ್ಯಕ್ರಮದಲ್ಲಿ “ಮುಸ್ಲಿಂ ಮಹಿಳೆಯರು ನಾಯಿ ಮರಿಯಂತೆ ಮಕ್ಕಳನ್ನು ಹೆರುತ್ತಾರೆ” ಎಂದು ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ದ ಜನವಾದಿ ಮಹಿಳಾ ಸಂಘಟನೆಯ ಈಶ್ವರಿ ಪದ್ಮುಂಜ ನೀಡಿದ್ದ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಾಗಿತ್ತು. ಎಫ್ಐಆರ್ ರದ್ದು‌ಕೋರಿ ಕಲ್ಲಡ್ಕ ಪ್ರಭಾಕರ ಭಟ್ ಹೈಕೋರ್ಟ್ ಮೊರೆ ಹೋಗಿದ್ದು ತಡೆಯಾಜ್ಞೆ ನೀಡಲಾಗಿತ್ತು.ಇಂದು ಹೈಕೋರ್ಟ್ ನಲ್ಲಿ ಅರ್ಜಿ ವಿಚಾರಣೆಗೆ ಬಂದಿದ್ದು, ದೂರುದಾರರಾಗಿರುವ ಈಶ್ವರಿ ಪದ್ಮುಂಜ ಪರವಾಗಿ ಹಿರಿಯ ವಕೀಲ ಎಸ್ ಬಾಲನ್ ಅವರು ಇಂದು ‘ತಡೆಯಾಜ್ಞೆ ತೆರವು ಅರ್ಜಿ’ ಸಲ್ಲಿಸಿದರು. ತಡೆಯಾಜ್ಞೆ ತೆರವು ಯಾಕೆ ಮಾಡಬೇಕು ಎಂದು ವಾದಿಸಲು ಸಿದ್ದ ಎಂದು ಬಾಲನ್ ಹೈಕೋರ್ಟಿಗೆ ಮನವಿ ಮಾಡಿದರು.‌

“ಕಲ್ಲಡ್ಕ ಪ್ರಭಾಕರ ಭಟ್ ಸಮುದಾಯವೊಂದರ ಮೇಲೆ ವಿಷ ಕಾರುತ್ತಲೇ ಇರುತ್ತಾರೆ. ಇದೊಂದು ರೀತಿಯಲ್ಲಿ ಬಂಧುಹತ್ಯೆ(fratricide) ಕೃತ್ಯವಾಗಿದೆ. ಸಮಾಜದಲ್ಲಿ ಸಹೋದರತೆಯಿಂದ ಇರುವ ಸಮುದಾಯವನ್ನು ಮುಗಿಸಲಾಗುತ್ತಿದೆ. ನ್ಯಾಯಾಲಯ ಅವರ ಮೇಲಿನ ಪ್ರಕರಣಕ್ಕೆ ಜಾಮೀನು, ತಡೆಯಾಜ್ಞೆ ನೀಡುತ್ತದೆ. ಆ ತಡೆಯಾಜ್ಞೆಯನ್ನು ಬಳಸಿಕೊಂಡು ಇನ್ನಷ್ಟೂ ಅಪರಾಧ ಕೃತ್ಯ ಮಾಡುತ್ತಿದ್ದಾರೆ. ನಾವು ತಡೆಯಾಜ್ಞೆ ತೆರವು ಅರ್ಜಿಯಲ್ಲಿ ಪ್ರಭಾಕರ ಭಟ್ ವಿರುದ್ದ ದಾಖಲಾಗಿರುವ 12 ಎಫ್ಐಆರ್ ಗಳ ಪಟ್ಟಿ ನೀಡಿದ್ದೇವೆ” ಎಂದು ಎಸ್ ಬಾಲನ್ ವಾದಿಸಿದರು.’ಕಲ್ಲಡ್ಕ ಪ್ರಭಾಕರ ಭಟ್ ಗೆ 83 ವರ್ಷ ಪ್ರಾಯವಾಗಿದೆ. ತಡೆಯಾಜ್ಞೆ ತೆರವು ಮಾಡಬಾರದು’ ಎಂದು ಭಟ್ ಪರ ಹಿರಿಯ ಪದಾಂಕಿತ ವಕೀಲ ಅರುಣ್ ಶ್ಯಾಂ ವಾದಿಸಿದರು.

ಪ್ರಭಾಕರ ಭಟ್ ಮಾಡಿರುವ ಭಾಷಣದ ತುಣುಕನ್ನು ಹಿರಿಯ ವಕೀಲ ಎಸ್ ಬಾಲನ್ ಓದಲು ಮುಂದಾದಾಗ ‘ಮೈಕ್ ಆಫ್ ಮಾಡಿ ಓದಿ’ ಎಂದು ನ್ಯಾಯಮೂರ್ತಿಗಳು ಸೂಚಿಸಿದರು.ನಾವು ಕೇಳಲಾಗದ ರೀತಿಯ ವಿಷಕಾರಿ ಭಾಷಣವನ್ನು ಕಲ್ಲಡ್ಕ ಪ್ರಭಾಕರ ಭಟ್ ಸರಣಿಯಾಗಿ ಮಾಡುತ್ತಿದ್ದಾರೆ. ಹಾಗಾಗಿ ತಡೆಯಾಜ್ಞೆ ತೆರವುಗೊಳಿಸಬೇಕು ಎಂದು ಬಾಲನ್ ವಾದಿಸಿದರು.

ಈಗಾಗಲೇ ಭಟ್ ವಿರುದ್ದ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಇದೇ ಅರ್ಜಿಯೊಂದಿಗೆ ಜೋಡಿಸಿ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಆದೇಶಿಸಿದರು.ಅರ್ಜಿ ವಿಚಾರಣೆ ಪೂರ್ಣಗೊಳ್ಳುವವರೆಗೆ ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ ದ್ವೇಷಭಾಷಣ ಮಾಡದಂತೆ ನಿರ್ಬಂಧಿಸಿ ಆದೇಶ ಹೊರಡಿಸಬೇಕು ಎಂದು ಎಸ್ ಬಾಲನ್ ಅವರು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರನ್ನು ಕೋರಿದರು. ಈ ಹಂತದಲ್ಲಿ ಭಟ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ಅವರು “ಇನ್ನು ಮುಂದೆ ಕಲ್ಲಡ್ಕ ಪ್ರಭಾಕರ ಭಟ್ ದ್ವೇಷ ಭಾಷಣ ಮಾಡುವುದಿಲ್ಲ” ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು. ಪ್ರಭಾಕರ ಭಟ್ ವಿರುದ್ದ ದಾಖಲಾದ ಎಲ್ಲಾ ಪ್ರಕರಣಗಳ ವಿಚಾರಣೆ ಜೂನ್ 16 ರಂದು ನಡೆಯಲಿದೆ.

- Advertisement -

Related news

error: Content is protected !!