ಪಣಜಿ: ಬಾಲಿವುಡ್‌ನ ಹಿರಿಯ ಹಾಗೂ ಖ್ಯಾತ ನಟ ನಾನಾ ಪಾಟೇಕರ್ (75) ಅವರು ಗೋವಾದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ತೀವ್ರ ಹೃದಯ ಸ್ತಂಭನಕ್ಕೆ ಒಳಗಾದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.

ಗೋವಾದ ಡೋನಾ ಪೌಲಾದಲ್ಲಿರುವ ನಿವಾಸದಲ್ಲಿ ಬೆಳಗಿನ ಜಾವ ನಾನಾ ಪಾಟೇಕರ್ ಅಸ್ವಸ್ಥರಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಸುಮಾರು 45 ನಿಮಿಷಗಳ ಕಾಲ ಸಿಪಿಆರ್ ಸೇರಿದಂತೆ ತುರ್ತು ಚಿಕಿತ್ಸೆ ನೀಡಿದರೂ ಯಾವುದೇ ಸ್ಪಂದನೆ ದೊರೆಯಲಿಲ್ಲ ಎನ್ನಲಾಗಿದೆ.ನಾನಾ ಪಾಟೇಕರ್ ಅವರ ಸಾವಿಗೆ ಹೃದಯ ಸ್ತಂಭನವೇ ಪ್ರಾಥಮಿಕ ಕಾರಣ ಎಂದು ತಿಳಿದುಬಂದಿದೆ. ಆದರೆ ಸಾವಿನ ನಿಖರ ಕಾರಣವನ್ನು ಖಚಿತಪಡಿಸಿಕೊಳ್ಳಲು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಪರೀಕ್ಷೆಯ ಬಳಿಕ ಅಧಿಕೃತವಾಗಿ ಸಾವಿನ ಕಾರಣ ತಿಳಿದುಬರಲಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಇತ್ತ ಪುಣೆಯಲ್ಲಿದ್ದ ನಾನಾ ಪಾಟೇಕರ್ ಅವರ ಪುತ್ರ ಮಲ್ಹಾರ್ ಪಾಟೇಕರ್ ಅವರಿಗೆ ತಂದೆಯ ನಿಧನದ ಸುದ್ದಿ ತಿಳಿದಿದ್ದು, ಅವರು ಗೋವಾದತ್ತ ಪ್ರಯಾಣ ಬೆಳೆಸಿದ್ದಾರೆ. ಕುಟುಂಬದವರಿಂದ ಹೆಚ್ಚಿನ ಮಾಹಿತಿ ಹಾಗೂ ಅಧಿಕೃತ ಹೇಳಿಕೆ ನಿರೀಕ್ಷಿಸಲಾಗಿದೆ.ನಾನಾ ಪಾಟೇಕರ್ ಅವರು ಹಿಂದಿ ಚಿತ್ರರಂಗದಲ್ಲಿ ಹಲವು ದಶಕಗಳ ಕಾಲ ತಮ್ಮ ವಿಶಿಷ್ಟ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಅವರ ನಿಧನದ ಸುದ್ದಿ ಚಿತ್ರರಂಗ ಹಾಗೂ ಅಭಿಮಾನಿಗಳಲ್ಲಿ ಆಘಾತ ಮೂಡಿಸಿದೆ.








