Friday, September 25, 2026
spot_imgspot_img
spot_imgspot_img

ಪಾಂಡೇಶ್ವರದ ಶ್ರೀನಿವಾಸ ಕಾಲೇಜಿನಲ್ಲಿ ರ‍್ಯಾಗಿಂಗ್ ಆರೋಪ: ಇಬ್ಬರು ವಿದ್ಯಾರ್ಥಿಗಳ ಅಪಹರಣ, ಹಲ್ಲೆ; ಹಿರಿಯರ ವಿರುದ್ಧ ಪ್ರಕರಣ

- Advertisement -
- Advertisement -

ಮಂಗಳೂರು: ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ ವಿಶ್ವವಿದ್ಯಾಲಯದ ಇಬ್ಬರು ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಹಿರಿಯ ವಿದ್ಯಾರ್ಥಿಗಳ ಗುಂಪೊಂದು ಬಲವಂತವಾಗಿ ಕರೆದೊಯ್ದು ಕೊಠಡಿಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.

ಈ ಕುರಿತು ವಿದ್ಯಾರ್ಥಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಆದಿಲ್ ಎಂ., ಅರ್ಷಕ್, ಅನೀಶ್, ಉವೈಸ್, ನಾಶೀದ್ ಅಮೀರ್, ರೋಹನ್ ರಮೇಶ್, ಆದಿಲ್ ವಿ.ಪಿ., ರೆಹಾನ್ ಎಂ.ಪಿ., ಶಿನಾಸ್ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಆ.19ರಂದು ಕಾಲೇಜಿನಿಂದ ನಡೆದುಕೊಂಡು ಸಾರ್ವಜನಿಕ ರಸ್ತೆಯಲ್ಲಿ ತೆರಳುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಹಿರಿಯ ವಿದ್ಯಾರ್ಥಿಗಳ ಗುಂಪು ಬಲವಂತವಾಗಿ ಕರೆದೊಯ್ದು, ಬೈಕ್‌ನಲ್ಲಿ ಮನೆಯೊಂದಕ್ಕೆ ಕರೆದೊಯ್ದು ಕೊಠಡಿಯಲ್ಲಿ ಕೂಡಿ ಹಾಕಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಲ್ಲಿ ಬಟ್ಟೆ ಬಿಚ್ಚಿಸಿ ನಿಲ್ಲಿಸಿ, ಬೊಬ್ಬೆ ಹಾಕದಂತೆ ಮುಖಕ್ಕೆ ಬಟ್ಟೆ ಒತ್ತಿಹಿಡಿದು ಬೆಲ್ಟ್, ಹ್ಯಾಂಗರ್ ಹಾಗೂ ಕೈಗಳಿಂದ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.


ಇಬ್ಬರು ವಿದ್ಯಾರ್ಥಿಗಳ ಮೇಲೆ ಕಬ್ಬಿಣದ ಪಂಚ್‌ನಿಂದಲೂ ಹಲ್ಲೆ ನಡೆಸಲು ಯತ್ನಿಸಲಾಗಿದ್ದು, ಓರ್ವ ವಿದ್ಯಾರ್ಥಿಯ ತಲೆ ಹಾಗೂ ಕುತ್ತಿಗೆಗೆ ಗುರಿಯಾಗಿದ್ದ ಹೊಡೆತ ತಪ್ಪಿಸಿಕೊಂಡ ಪರಿಣಾಮ ತಲೆಯ ಹಿಂಭಾಗಕ್ಕೆ ಉಜ್ಜಿಕೊಂಡು ಹೋಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮತ್ತೊಬ್ಬ ವಿದ್ಯಾರ್ಥಿಯ ಎಡಭುಜಕ್ಕೆ ಹೊಡೆತ ಬಿದ್ದಿದೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ವಿಡಿಯೊ ಚಿತ್ರೀಕರಣ ಮಾಡಲಾಗಿದೆ ಎಂಬ ಆರೋಪವೂ ಇದೆ.


ರ್ಯಾಗಿಂಗ್ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರೆ ಚಾಕುವಿನಿಂದ ಹಲ್ಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ವಿದ್ಯಾರ್ಥಿ ದೂರಿನಲ್ಲಿ ತಿಳಿಸಿದ್ದಾರೆ. ಸಂಜೆ ಸುಮಾರು 6 ಗಂಟೆಯವರೆಗೆ ಕೊಠಡಿಯಲ್ಲಿ ಕೂಡಿ ಹಾಕಲಾಗಿತ್ತು ಎನ್ನಲಾಗಿದೆ. ಘಟನೆ ಬಳಿಕ ಭಯಗೊಂಡ ವಿದ್ಯಾರ್ಥಿಗಳು ಮನೆಯವರಿಗೆ ಮಾಹಿತಿ ನೀಡಿದ್ದು, ಮನೆಯವರ ಸಲಹೆಯಂತೆ ದೂರು ನೀಡಲು ವಿಳಂಬವಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣದ ತನಿಖೆ ಮುಂದುವರಿದಿದೆ.

- Advertisement -

Related news

error: Content is protected !!