

ಮಂಗಳೂರು: ಕಾಲೇಜು ಕ್ಯಾಂಪಸ್ ಬಳಿ ವಿದ್ಯಾರ್ಥಿಯೊಬ್ಬನಿಗೆ ಚೂರಿಯಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಮಂಗಳೂರಿನ ಬಳ್ಳಾಲ್‌ಭಾಗ್‌ನಲ್ಲಿ ಅ.3ರಂದು ನಡೆದಿದೆ.


ಬಳ್ಳಾಲ್‌ಭಾಗ್‌ನ ಶ್ರೀದೇವಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಸಿ.ಎ ವ್ಯಾಸಂಗ ಮಾಡುತ್ತಿರುವ ಬೆಳ್ತಂಗಡಿ ಮೂಲದ ಮಹಮ್ಮದ್ ಉನೈಸ್ (20) ಹಲ್ಲೆಗೊಳಗಾದ ವಿದ್ಯಾರ್ಥಿ.ಅ.3ರಂದು ಬೆಳಗ್ಗೆ ಕಾಲೇಜಿನ ಸಮೀಪದ ಸಿಟಿ ಅರೇನಾ ಟರ್ಫ್‌ನಲ್ಲಿ ಕಬ್ಬಡಿ ಆಡುತ್ತಿದ್ದ ವೇಳೆ ಉನೈಸ್‌ನ ಸ್ನೇಹಿತ ರಾಯಿಝ್ ಹಾಗೂ ಶ್ರೀದೇವಿ ಕಾಲೇಜಿನ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿ ಕಾಟಿಪಳ್ಳದ ರಿಯಾನ್ ನಡುವೆ ಯಾವುದೋ ವಿಚಾರಕ್ಕೆ ಜಗಳ ನಡೆದಿದೆ.
ಈ ವೇಳೆ ಉನೈಸ್ ಸೇರಿದಂತೆ ಇತರ ವಿದ್ಯಾರ್ಥಿಗಳು ಜಗಳ ಬಿಡಿಸಲು ಮುಂದಾಗಿದ್ದು, ರಿಯಾನ್ ಉನೈಸ್‌ಗೆ ಕೈಯಿಂದ ಹೊಡೆದಿದ್ದಾನೆ ಎನ್ನಲಾಗಿದೆ.ಬಳಿಕ ಉನೈಸ್ ಕಾಲೇಜಿನ ಕ್ಯಾಂಟೀನ್ ಬಳಿ ನಿಂತಿದ್ದಾಗ ಮಧ್ಯಾಹ್ನ ಸುಮಾರು 1.45ರ ವೇಳೆಗೆ ರಿಯಾನ್ ಹಾಗೂ ಇತರ ಐವರು ಎರಡು ದ್ವಿಚಕ್ರ ವಾಹನಗಳಲ್ಲಿ ಅಲ್ಲಿಗೆ ಬಂದಿದ್ದಾರೆ.
ಉನೈಸ್‌ನನ್ನು ಸುತ್ತುವರಿದ ಆರೋಪಿಗಳು ಏಕಾಏಕಿ ಹಲ್ಲೆ ನಡೆಸಿ, “ನಿನ್ನನ್ನು ಕೊಲೆ ಮಾಡದೇ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.ಈ ವೇಳೆ ಚೂರಿ ತೆಗೆದ ಆರೋಪಿಗಳು ಉನೈಸ್‌ನ ತಲೆ, ಬೆನ್ನು, ಎಡಕಿವಿ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಚುಚ್ಚಿ ಗಾಯಗೊಳಿಸಿದ್ದಾರೆ.
ಗಾಯಗೊಂಡ ಉನೈಸ್ ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.ಘಟನೆಗೆ ಸಂಬಂಧಿಸಿ ಉನೈಸ್ ನೀಡಿದ ದೂರಿನ ಆಧಾರದ ಮೇಲೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ. 88/2026ರಂತೆ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.








