
ಧಾರವಾಡ : ಧಾರವಾಡದ ಗಿರಿನಗರದ ಮನೆಯೊಂದರಲ್ಲಿ ಬಿಎಸ್‌ಸಿ ಓದುತ್ತಿದ್ದ ಆದಿತ್ಯ ಮ್ಯಾಗೇರಿ ಎಂಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಪೊಲೀಸರ ಕಿರುಕುಳ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಧಾರವಾಡದ ಕಿಟೆಲ್ ಕಾಲೇಜಿನಲ್ಲಿ ಬಿಎಸ್‌ಸಿ ಓದುತ್ತಿದ್ದ ಆದಿತ್ಯ ಮ್ಯಾಗೇರಿ ಮೂಲತಃ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಬೇಲೂರು ಗ್ರಾಮದ ಯುವಕ. ಧಾರವಾಡದ ಗಿರಿನಗರದಲ್ಲಿ ತನ್ನ ಸ್ನೇಹಿತರೊಂದಿಗೆ ಬಾಡಿಗೆ ರೂಮಿನಲ್ಲಿ ವಾಸವಾಗಿದ್ದ.ಗಾಂಜಾ ಡ್ರೈವ್ ಮಾಡುವ ವೇಳೆ ಶನಿವಾರ ಮೃತ ಆದಿತ್ಯ ಸೇರಿ ಹಲವು ವಿದ್ಯಾರ್ಥಿಗಳನ್ನು ಗಾಂಜಾ ಸೇವನೆ ಆರೋಪದಡಿ ಪೊಲೀಸರು ವಶಕ್ಕೆ ಪಡೆದು ತಪಾಸಣೆಗೆ ಒಳಪಡಿಸಿದ್ದರು. ಈ ವೇಳೆ ಆದಿತ್ಯ ಗಾಂಜಾ ಸೇವನೆ ನೆಗೆಟಿವ್ ಬಂದಿತ್ತು ಎನ್ನಲಾಗಿದೆ.
ಆದರೆ ನೆಗೆಟಿವ್ ಬಂದಿದ್ದ ಆದಿತ್ಯ ಸೇರಿದಂತೆ ಇತರ ವಿದ್ಯಾರ್ಥಿಗಳ ಬಳಿ ಪೊಲೀಸರು ಹಣ ವಸೂಲಿ ಮಾಡಿದ್ದಾರೆ ಎಂಬ ಆರೋಪ ಸಹ ಕೇಳಿಬಂದಿತ್ತು.ಈ ಸಾವಿಗೆ ಪೊಲೀಸರ ಕಿರುಕುಳವೇ ಕಾರಣ ಎಂದು ಮೃತ ಆದಿತ್ಯಾ ತಾಯಿ ಕವಿತಾ ಮ್ಯಾಗೇರಿ ಆರೋಪಿಸಿದ್ದಾರೆ.ಮೂವರು ಪೊಲೀಸರ ಅಮಾನತುಪ್ರಕರಣದಲ್ಲಿ ಹಣಕ್ಕೆ ಬೇಡಿಕೆಯಿಟ್ಟು ಕಿರುಕುಳ ನೀಡಲಾಗಿತ್ತು ಎನ್ನುವ ಆರೋಪ ಕೇಳಿ ಬಂದಿದ್ದರಿಂದ, ಧಾರವಾಡದ ವಿದ್ಯಾಗಿರಿ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಹೆಡ್ ಕಾನ್ಸ್ಟೇಬಲ್ ಚಂದ್ರು ನಡುವಿನಮನಿ, ಕಿರಣ್ ಡೊಕ್ಕನ್ನವರ್ ಹಾಗೂ ಸೈಯದ್ ತಹಶೀಲ್ದಾರ್ ಅಮಾನತುಗೊಂಡಿದ್ದಾರೆ.”ಆದಿತ್ಯ ಮ್ಯಾಗೇರಿ ಪೋಷಕರು ಯುಡಿಆರ್ ದೂರು ನೀಡಿದ್ದಾರೆ. ನಮ್ಮ ಮಗನ ಡ್ರಗ್ಸ್ ಟೆಸ್ಟ್ ನೆಗೆಟಿವ್ ಬಂದಿದ್ದರೂ ಪೊಲೀಸರು 2 ಸಾವಿರ ಹಣ ಕೇಳಿದ್ದರು ಎಂದು ಪೋಷಕರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತಪ್ಪು ಅಭಿಪ್ರಾಯ ಮೂಡುವ ರೀತಿಯ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿದ್ದೇನೆ. ಈ ಪ್ರಕರಣವನ್ನು ಡಿಸಿಪಿ ಶ್ರುತಿ ಅವರು ತನಿಖೆ ಮಾಡುತ್ತಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಇನ್ನೂ ಹೆಚ್ಚುವರಿ ಲೋಪಗಳು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ತಿಳಿಸಿದ್ದಾರೆ..








