
ನವದೆಹಲಿ: ಕೇಂದ್ರ ಸರಕಾರದ ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯ ಹಿನ್ನೆಲೆಯಲ್ಲಿ ದೆಹಲಿಯ ಶತಮಾನಕ್ಕೂ ಹಳೆಯದಾದ ಕೇಂದ್ರ ಸಚಿವಾಲಯದ ಗ್ರಂಥಾಲಯದ ಪುಸ್ತಕಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.
ಸುಮಾರು 135 ವರ್ಷಗಳ ಇತಿಹಾಸ ಹೊಂದಿರುವ ಈ ಗ್ರಂಥಾಲಯದಲ್ಲಿ 8.5 ಲಕ್ಷಕ್ಕೂ ಅಧಿಕ ಪುಸ್ತಕಗಳ ಸಂಗ್ರಹವಿದೆ. ಪ್ರಸ್ತುತ ದೆಹಲಿಯ ಶಾಸ್ತ್ರಿ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಾಲಯವನ್ನು ಸೆಂಟ್ರಲ್ ವಿಸ್ಟಾ ಯೋಜನೆಯಡಿ ಕಟ್ಟಡದ ಪುನರಾಭಿವೃದ್ಧಿ ಹಿನ್ನೆಲೆಯಲ್ಲಿ ಸ್ಥಳಾಂತರಿಸಲು ಕೇಂದ್ರ ಸರಕಾರ ಮುಂದಾಗಿದೆ.
ಈ ಕುರಿತು ಸೋಮವಾರ (ನ.16) ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಕುಮಾರ್ ಮತ್ತು ನ್ಯಾಯಮೂರ್ತಿ ಸಂಜೀವ್ ಸಚ್ದೇವ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ, ಪುಸ್ತಕಗಳ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಕ್ರಮಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಗ್ರಂಥಾಲಯದ ಪುಸ್ತಕಗಳನ್ನು ನವೆಂಬರ್ ತಿಂಗಳೊಳಗೆ ಸ್ಥಳಾಂತರಿಸಲು ತುರ್ತು ಪ್ರಯತ್ನ ನಡೆಯುತ್ತಿದೆ. ಆದರೆ ಹೊಸ ಸ್ಥಳದಲ್ಲಿ ಪುಸ್ತಕಗಳನ್ನು ಹೇಗೆ ಸಂರಕ್ಷಿಸಲಾಗುತ್ತದೆ ಮತ್ತು ಎಷ್ಟು ಸ್ಥಳಾವಕಾಶ ಒದಗಿಸಲಾಗಿದೆ ಎಂಬುದರ ಕುರಿತು ಸ್ಪಷ್ಟತೆ ಇಲ್ಲ ಎಂದು ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಾಯಕರಾಗಿ ನೇಮಕಗೊಂಡಿರುವ ಹಿರಿಯ ವಕೀಲೆ ಹರಿಪ್ರಿಯಾ ಪದ್ಮನಾಭನ್ ನ್ಯಾಯಪೀಠದ ಗಮನಕ್ಕೆ ತಂದರು.
ಪ್ರಸ್ತುತ ಗ್ರಂಥಾಲಯದಲ್ಲಿ ಪುಸ್ತಕಗಳ ಕಪಾಟುಗಳಿಗೆ ಬಳಸಲಾಗುತ್ತಿರುವ ಸ್ಥಳ ಮತ್ತು ಹೊಸ ಕಟ್ಟಡದಲ್ಲಿ ಒದಗಿಸಲಾಗಿರುವ ಸ್ಥಳದ ವಿವರಗಳನ್ನು ಹೋಲಿಕೆ ಮಾಡಿ ನೀಡುವಂತೆ ಅವರು ಮನವಿ ಮಾಡಿದರು.
ಇದೇ ವೇಳೆ, ಆರ್.ಕೆ. ಪುರಂನಲ್ಲಿರುವ ಸ್ಥಳವೊಂದರಲ್ಲಿ ಸುಮಾರು ಎರಡು ಲಕ್ಷ ಪುಸ್ತಕಗಳು ಕಳೆದ 15 ವರ್ಷಗಳಿಂದ ಕಳಪೆ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು. ಇದರಿಂದ ಪುಸ್ತಕಗಳ ಸಂರಕ್ಷಣೆಯ ಬಗ್ಗೆ ನ್ಯಾಯಪೀಠ ಕಳವಳ ವ್ಯಕ್ತಪಡಿಸಿತು.
ಈ ಸಂದರ್ಭದಲ್ಲಿ ಕೇಂದ್ರ ಸರಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರನ್ನು ಪ್ರಶ್ನಿಸಿದ ನ್ಯಾಯಮೂರ್ತಿ ಸಂಜಯ್ ಕುಮಾರ್, ಪುಸ್ತಕಗಳನ್ನು ಸ್ಥಳಾಂತರಿಸುವ ಆತುರ ಏಕೆ ಎಂದು ಕೇಳಿದರು.
“ಈ ಪುಸ್ತಕಗಳ ಬಗ್ಗೆ ಸ್ವಲ್ಪ ಗೌರವ ತೋರಿಸಿ. ಇವು ನಮ್ಮ ಪರಂಪರೆಯ ಭಾಗವಾಗಿವೆ. ನಿಮಗೆ ಅವುಗಳ ಅಗತ್ಯವಿಲ್ಲದಿದ್ದರೆ, ಅವುಗಳ ಮೌಲ್ಯವನ್ನು ಗುರುತಿಸುವ ಬೇರೆ ದೇಶಕ್ಕೆ ನೀಡಿ. ಪುಸ್ತಕಗಳನ್ನು ನಿರ್ಲಕ್ಷಿಸುವುದು ಸರಿಯಲ್ಲ” ಎಂದು ನ್ಯಾಯಮೂರ್ತಿ ಅಭಿಪ್ರಾಯಪಟ್ಟರು.
ಆರ್.ಕೆ. ಪುರಂನಲ್ಲಿ ಇರಿಸಲಾಗಿರುವ ಪುಸ್ತಕಗಳು ತುಳಸಿ ಸದನ್ ಗ್ರಂಥಾಲಯಕ್ಕೆ ಸೇರಿವೆ ಎಂದು ಕೇಂದ್ರ ಸರಕಾರದ ಪರ ವಕೀಲರು ತಿಳಿಸಿದರು. ಈ ಬಗ್ಗೆ ಪುಸ್ತಕಗಳ ಮೇಲೆ ಗ್ರಂಥಾಲಯದ ಗುರುತು ಇದೆಯೇ ಎಂಬುದನ್ನು ಪರಿಶೀಲಿಸುವಂತೆ ನ್ಯಾಯಾಲಯವು ಅಮಿಕಸ್ ಕ್ಯೂರಿಗೆ ಸೂಚಿಸಿತು.
ಇನ್ನೊಂದೆಡೆ, ಕೇಂದ್ರ ಸರಕಾರ ಸಲ್ಲಿಸಿರುವ ಅಫಿಡವಿಟ್ನಲ್ಲಿ ಗ್ರಂಥಾಲಯಕ್ಕೆ ಹೊಸ ವ್ಯವಸ್ಥೆ ಕಲ್ಪಿಸುವ ಕುರಿತು ಮಾಹಿತಿ ನೀಡಲಾಗಿದೆ. ಸೆಂಟ್ರಲ್ ವಿಸ್ಟಾ ಯೋಜನೆಯಡಿ ನಿರ್ಮಾಣವಾಗುತ್ತಿರುವ ಕರ್ತವ್ಯ ಭವನ-4ರಲ್ಲಿ ಕೇಂದ್ರ ಸಚಿವಾಲಯದ ಗ್ರಂಥಾಲಯ ಹಾಗೂ ತುಳಸಿ ಸದನ್ ಗ್ರಂಥಾಲಯಕ್ಕೆ ಒಟ್ಟು ಸುಮಾರು 5,583 ಚದರ ಮೀಟರ್ ಸ್ಥಳ ಮೀಸಲಿಡಲಾಗಿದೆ. ಈ ಕಟ್ಟಡದ ಕಾಮಗಾರಿ 2028ರ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಅಲ್ಲಿಯವರೆಗೆ ಗ್ರಂಥಾಲಯದ ಪುಸ್ತಕಗಳನ್ನು ತಾತ್ಕಾಲಿಕವಾಗಿ ನವದೆಹಲಿ ನೆತಾಜಿ ನಗರದ ಸರಕಾರಿ ಕಚೇರಿ ಸಂಕೀರ್ಣಕ್ಕೆ ಸ್ಥಳಾಂತರಿಸಲು ಯೋಜಿಸಲಾಗಿದೆ. ಇದಕ್ಕಾಗಿ ಸುಮಾರು 3,890 ಚದರ ಮೀಟರ್ ಸ್ಥಳ ಒದಗಿಸಲಾಗಿದ್ದು, ಸುಮಾರು 6.25 ಲಕ್ಷ ಪುಸ್ತಕಗಳನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿರಲಿದೆ ಎಂದು ಸರಕಾರ ತಿಳಿಸಿದೆ.
ಆದರೆ ಪುಸ್ತಕಗಳ ಸಂರಕ್ಷಣೆ ಮತ್ತು ಸ್ಥಳಾಂತರದ ವ್ಯವಸ್ಥೆಗಳ ಬಗ್ಗೆ ಇನ್ನಷ್ಟು ಸ್ಪಷ್ಟತೆ ಅಗತ್ಯವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಕೊನೆಗೆ, ಮುಂದಿನ ವಿಚಾರಣೆ ನಡೆಯುವವರೆಗೆ ಗ್ರಂಥಾಲಯದ ಪುಸ್ತಕಗಳನ್ನು ಸ್ಥಳಾಂತರಿಸಬಾರದು ಎಂದು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿತು. ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 20ಕ್ಕೆ ಮುಂದೂಡಲಾಗಿದೆ.
ಐತಿಹಾಸಿಕ ಮಹತ್ವ ಹೊಂದಿರುವ ಅಪರೂಪದ ಪುಸ್ತಕಗಳು, ಸರಕಾರಿ ದಾಖಲೆಗಳು ಹಾಗೂ ಗಜೆಟಿಯರ್ಗಳನ್ನು ಒಳಗೊಂಡಿರುವ ಈ ಗ್ರಂಥಾಲಯದ ಸಂಗ್ರಹವನ್ನು ಸೂಕ್ತವಾಗಿ ಸಂರಕ್ಷಿಸುವ ಅಗತ್ಯವನ್ನು ಸುಪ್ರೀಂ ಕೋರ್ಟ್ ಮತ್ತೊಮ್ಮೆ ಒತ್ತಿಹೇಳಿದೆ.








