Thursday, August 20, 2026
spot_imgspot_img
spot_imgspot_img

ತೆರೆದ ಚರಂಡಿಗೆ ಬಿದ್ದ 8 ವರ್ಷದ ಬಾಲಕ; ಮಗನ ಸಾವಿನ ಸುದ್ದಿ ಕೇಳಿ ತಾಯಿ ಆ್ಯಸಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನ

- Advertisement -
- Advertisement -

ಲಕ್ನೋ: ಉತ್ತರ ಪ್ರದೇಶದ ರಾಮ್‌ಪುರದಲ್ಲಿ ಭಾರೀ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ತೆರೆದ ಚರಂಡಿಗೆ ಬಿದ್ದು 8 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಮಗನ ಸಾವಿನ ಸುದ್ದಿ ತಿಳಿದು ತಾಯಿ ಆ್ಯಸಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವುದು ಘಟನೆ ನಡೆದಿದೆ.

ರಾಮ್‌ಪುರದ ಕೊತ್ವಾಲಿ ಸಿವಿಲ್ ಲೈನ್ಸ್ ವ್ಯಾಪ್ತಿಯ ಅಜಿತ್‌ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಜಮೀರ್ ಅಹ್ಮದ್ ಅವರ ಮಗ ಅಮನ್ ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ. ಶಾಲೆ ಮುಗಿಸಿ ತನ್ನ ಅಣ್ಣನೊಂದಿಗೆ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯಿಂದ ಜ್ವಾಲಾನಗರ, ಅಗಾಪುರ ಹಾಗೂ ಅಜಿತ್‌ಪುರ ಭಾಗದ ನೀರು ಚರಂಡಿಗಳಲ್ಲಿ ಹರಿಯುತ್ತಿತ್ತು. ನೀರಿನ ರಭಸವೂ ಹೆಚ್ಚಾಗಿತ್ತು ಇದೇ ವೇಳೆ ಅಮನ್ ಜಾರಿ ತೆರೆದ ಚರಂಡಿಗೆ ಬಿದ್ದಿದ್ದಾನೆ.

ಅಮನ್ ಚರಂಡಿಗೆ ಬಿದ್ದಿದ್ದನ್ನು ನೋಡಿದ ಆತನ ಅಣ್ಣ ಕೂಡಲೇ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಾಲಕನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಸುಮಾರು ಒಂದು ಗಂಟೆ ಕಾರ್ಯಾಚರಣೆ ನಡೆಸಿದ ಬಳಿಕ ಅಮನ್‌ನ ಮೃತದೇಹ ಪತ್ತೆಯಾಗಿದೆ. ಚರಂಡಿಯೊಳಗಿದ್ದ ಕಬ್ಬಿಣದ ರಾಡ್‌ಗೆ ನೇತಾಡುತ್ತಿದ್ದ ಸ್ಥಿತಿಯಲ್ಲಿ ಬಾಲಕನ ಶವ ಸಿಕ್ಕಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅದಾಗಲೇ ಬಾಲಕ ಮೃತಪಟ್ಟಿದ್ದ.

ಈ ಸುದ್ದಿ ಕುಟುಂಬಕ್ಕೆ ತಲುಪುತ್ತಿದ್ದಂತೆ ಮಗನ ಸಾವಿನ ಆಘಾತ ತಡೆಯಲಾಗದೆ ಅಮನ್‌ನ ತಾಯಿ ನಗ್ಮಾ ಮನೆಯಲ್ಲಿ ಇಟ್ಟಿದ್ದ ಆ್ಯಸಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಅಜಿತ್‌ಪುರದ ಹಲವು ಕಡೆ ಚರಂಡಿಗಳು ತೆರೆದಿದ್ದರೂ ಅಧಿಕಾರಿಗಳು ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಕುಟುಂಬಸ್ಥರು ಹಾಗೂ ಸ್ಥಳೀಯರು ಆರೋಪಿಸಿದ್ದಾರೆ. ಮಳೆ ಬಂದಾಗ ಈ ತೆರೆದ ಚರಂಡಿಗಳು ಮತ್ತಷ್ಟು ಅಪಾಯಕಾರಿಯಾಗುತ್ತವೆ ಎಂದು ಸ್ಥಳೀಯರು ಹಲವು ಬಾರಿ ಆತಂಕ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಇದೇ ಪ್ರದೇಶದಲ್ಲಿ ಸುಮಾರು 20ರಿಂದ 25 ದಿನಗಳ ಹಿಂದೆಯೂ ಏಳು ವರ್ಷದ ಬಾಲಕನೊಬ್ಬ ಚರಂಡಿಯಲ್ಲಿ ಮುಳುಗಿ ಮೃತಪಟ್ಟಿದ್ದ. ಹೀಗಾಗಿ ಒಂದೇ ಪ್ರದೇಶದಲ್ಲಿ ಪದೇಪದೆ ಇಂತಹ ಘಟನೆಗಳು ನಡೆಯುತ್ತಿರುವುದು ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದೆ.

- Advertisement -

Related news

error: Content is protected !!