


ವಿಧಾನ ಸಭಾ ಚುಣಾವಣೆಯ ನಂತರ 15 ನೇ ಹಣಕಾಸಿನ ಉಳಿಕೆ ಮೊತ್ತವನ್ನು ಮತ್ತು ಅಮೃತ ನಗರೋತ್ಥಾನದ ಭಾಗ 4ರ ಕ್ರಿಯೋ ಯೋಜನೆಯ ಅನುದಾನವನ್ನು ಬದಲೀ ಕಾಮಗಾರಿಗಳಿಗೆ ಉಪಯೋಗಿಸಿ ಈ ವಿಚಾರವನ್ನು ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 12 ಜನ ಬಿಜೆಪಿ ಸದಸ್ಯರ ಗಮನಕ್ಕೆ ತರದೆ, ಅವರನ್ನು ನಿರ್ಲಕ್ಷಿಸುವ ಮೂಲಕ, ಬೇಜವಬ್ಧಾರಿ ತೋರಿದ ಅಧಿಕಾರಿಗಳ ಹಾಗೂ ಶಾಸಕರ ವಿರುದ್ಧ ಪಟ್ಟಣ ಪಂಚಾಯತ್‌ನ ಬಿಜೆಪಿ ಸದಸ್ಯರಿಂದ ವಿಟ್ಲ ಪಟ್ಟಣ ಪಂಚಾಯತ್‌ನ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಈ ಹಿಂದೆಯೂ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಗಳಿಗೆ, ಆಡಳಿತಾಧಿಕಾರಿಯವರಿಗೆ, ತಹಶೀಲ್ದಾರರಿಗೆ, ಮುಖ್ಯಾಧಿಕಾರಿಗಳಿಗೆ ಹಾಗೂ ಶಾಸಕರಿಗೆ ಮನವಿ ನೀಡಲಾಗಿದೆ. ಆದರೆ ಈ ಬಗ್ಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳು, ಶಾಸಕರು ಸ್ಪಂದನೆ ನೀಡದೇ ಇರವುದು ಪಟ್ಟಣ ಪಂಚಾಯತ್ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯ ಅರುಣ್ ವಿಟ್ಲ ಮಾತನಾಡಿ “ತಹಶೀಲ್ದಾರರು ನಮಗೆ ಪಟ್ಟಣ ಪಂಚಾಯತ್ ಸದಸ್ಯರೆಂದು ನೀಡಿದ ಪ್ರಮಾಣ ಪತ್ರದ ಮೇರೆಗೆ ಅನುದಾನವನ್ನು ನೀಡುವಾಗ ಬಿಜೆಪಿ ಸದಸ್ಯರನ್ನು ವಿಶ್ವಾಸ ಗಮನಾರ್ಹಕ್ಕೆ ತೆಗೆದುಕೊಳ್ಳಬೇಕು. ಮಾಜಿ ಶಾಸಕ ಸಂಜೀವ ಮಠಂದೂರುರವರು ತಮ್ಮ ಕಾಲಘಟ್ಟದಲ್ಲಿ ನಗರೋತ್ಥಾನದ ಅನುದಾನವನ್ನು ವಿಟ್ಲ ಪಟ್ಟಣ ಪಂಚಾಯತ್ ಕಟ್ಟಡವನ್ನು ಹಳೆಯ ಪುರಭವನಕ್ಕೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಸುಮಾರು 54 ಲಕ್ಷ ಅನುದಾನವನ್ನು ಕಾಯ್ದಿರಿಸಿದ್ದರು. ಹಾಗೂ ಗಡಿ ಪ್ರದೇಶಗಳಲ್ಲಿ ಸ್ವಾಗತ ಫಲಕಕ್ಕೆ ಅನುದಾನವನ್ನು ಕಾಯ್ದಿರಿಸಲಾಗಿತ್ತು. ಆದರೆ ಇದೀಗ ಮಾನ್ಯ ಶಾಸಕರಾದ ಅಶೋಕ್ ಕುಮಾರ್ ರೈಯವರು ಕಾಯ್ದಿರಿಸಿದ ಈ ಅನುದಾನಗಳನ್ನು ಬೇರೆ ಕಾಮಗಾರಿಗಳಿಗೆ ವಿನಿಯೋಗಿಸಬೇಕೆಂದು ಪತ್ರ ಬರೆದಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಈ ಎರಡೂ ಅನುದಾನಗಳನ್ನು ತಾವು ಅದಷ್ಟು ಬೇಗನೆ ಹಿಂಪಡೆಯಬೇಕು. ಮತ್ತು ವಿಟ್ಲದ ಅಭಿವೃದ್ಧಿಯಲ್ಲಿ ಪಕ್ಷ ಭೇದ ತೋರದೆ ತಾವು ಸದಾ ನಮ್ಮ ಜೊತೆ ಸಹಕರಿಸಬೇಕೆಂದು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಅಶೋಕ್ ಕುಮಾರ್ ಶೆಟ್ಟಿ ಮಾತನಾಡಿ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುವ ಅಕ್ರಮ ಚಟುವಟಿಕೆ, ಭ್ರಷ್ಟಾಚಾರ, ದಬ್ಬಾಳಿಕೆ ಇವೆಲ್ಲದುದರ ಬಗ್ಗೆ ಸೂಕ್ತ ಇಲಾಖಾಧಿಕಾರಿಗಳು ಗಮನ ಹರಿಸಿ ಸರಿಯಾದ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಬಳಿಕ ಗೋಪಾಲ ನಾಯ್ಕ ಮುಖ್ಯಾಧಿಕಾರಿ ಹಾಗೂ ಆಡಳಿತಾಧಿಕಾರಿ ಎಸ್ ಬಿ ಕೂಡಲಗಿ ( ಬಂಟ್ವಾಳ ತಹಶೀಲ್ದಾರ್)ಯವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಪಂಚಾಯತ್ ಸದಸ್ಯರಾದ ಕರುಣಾಕರ ನಾಯ್ತೋಟ್ಟು, ಯನ್ ಕೃಷ್ಣ, ಸಿ ಹೆಚ್ ಜಯಂತ, ವಸಂತ, ಸಂಗೀತ, ವಿಜಯಲಕ್ಷ್ಮೀ, ರಕ್ಷಿತಾ, ಸುನೀತಾ ಉಪಸ್ಥಿತರಿದ್ದರು.








